ಉಡುಪಿ: ಹಣಕಾಸಿನ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ರೌಡಿಶೀಟರ್ ಸುಜಿತ್ ಪಿಂಟೊ (43) ಅವರನ್ನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸುಜಿತ್ ಪಿಂಟೊ ಮತ್ತು ರಿಕ್ಷಾ ಚಾಲಕ ಪ್ರಮೋದ್ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸುಜಿತ್ ಪಿಂಟೊ ಅವರು ಪ್ರಮೋದ್ಗೆ ಹಣ ಪಾವತಿಸುವುದು ಬಾಕಿ ಇದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿತ್ತು ಎಂದು ಹೇಳಲಾಗುತ್ತಿದೆ.
ಇಬ್ಬರೂ ಮದ್ಯದ ಅಮಲಿನಲ್ಲಿದ್ದಾಗ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆಕ್ರೋಶಗೊಂಡ ಪ್ರಮೋದ್, ಕಬ್ಬಿಣದ ರಾಡ್ನಿಂದ ಸುಜಿತ್ ಪಿಂಟೊ ಅವರ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸುಜಿತ್ ಮೃತಪಟ್ಟಿದ್ದಾರೆ.
ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಜಿತ್:
ಕೊಲೆಯಾದ ಸುಜಿತ್ ಪಿಂಟೊ ವಿರುದ್ಧ ಈ ಹಿಂದೆಯೂ ಹಲವು ಕೊಲೆ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. 2018ರಲ್ಲಿ ನಡೆದ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣದಲ್ಲೂ ಅವರು ಆರೋಪಿಯಾಗಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಎನ್ನಲಾದ ರಿಕ್ಷಾ ಚಾಲಕ ಪ್ರಮೋದ್ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.









