ತುಮಕೂರು: ವಿಧಾನ ಪರಿಷತ್ ಚುನಾವಣೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದಕ್ಕೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ಶಾಸಕರು ಹಾಗೂ ಸ್ಥಳೀಯ ನಾಯಕರು ಸರಿಯಾಗಿ ಕೆಲಸ ಮಾಡದಿರುವುದೇ ಸೋಲಿಗೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ನಮಗೆ ನಿರಾಸೆ ಮೂಡಿಸಿದೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 35 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇಷ್ಟೊಂದು ಶಾಸಕರಿದ್ದರೂ ಕಾಂಗ್ರೆಸ್ ಸೋಲು ಕಂಡಿರುವುದು ನಿಜಕ್ಕೂ ವಿಪರ್ಯಾಸ ಎಂದು ಹೇಳಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕರು ಹಾಗೂ ಸ್ಥಳೀಯ ನಾಯಕರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಆಯಾ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪಕ್ಷದ ನಾಯಕರು ಸಮರ್ಪಕವಾಗಿ ಕೆಲಸ ಮಾಡಬೇಕಿತ್ತು. ಈ ಬಾರಿ ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆಗಳು ಸೇರಿದಂತೆ ಅಗತ್ಯ ಮಾಹಿತಿ ಲಭ್ಯವಿತ್ತು. ಆದರೂ ಸರಿಯಾಗಿ ಕೆಲಸ ಮಾಡಿಲ್ಲ. 35 ವಿಧಾನಸಭಾ ಕ್ಷೇತ್ರಗಳ ಪೈಕಿ 26ರಲ್ಲಿ ನಮ್ಮ ಶಾಸಕರಿದ್ದರೂ ಸೋಲು ಕಂಡಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದರಿಂದ ಕಾಂಗ್ರೆಸ್ ಸೋಲು ಅನುಭವಿಸಿದೆಯೇ ಎಂಬ ಪ್ರಶ್ನೆಗೂ ರಾಜಣ್ಣ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಆಸ್ತಿ. ಅವರನ್ನು ಸೈಡ್ಲೈನ್ ಮಾಡಿರುವುದರಿಂದ ಚುನಾವಣೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲೂ ಸಾಧ್ಯವಿಲ್ಲ, ಪರಿಣಾಮ ಬೀರಿಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.
ಹಿಂದಿನ ಕಾಲಕ್ಕೂ ಈಗಿನ ರಾಜಕೀಯ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟರು. ಹಿಂದೆ ಜನರಿಗೆ ಮಾಹಿತಿ ಪಡೆಯಲು ಪತ್ರಿಕೆಗಳೇ ಪ್ರಮುಖ ಮೂಲವಾಗಿದ್ದವು. ಆದರೆ ಈಗ ಯಾವುದೇ ಘಟನೆ ನಡೆದರೂ ಕ್ಷಣಾರ್ಧದಲ್ಲಿ ಜನರಿಗೆ ಮಾಹಿತಿ ತಲುಪುತ್ತಿದೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಜನರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇಂದಿನ ರಾಜಕೀಯ ಬಹಳ ವೇಗವಾಗಿ ಬದಲಾಗುತ್ತಿದೆ ಎಂದು ತಿಳಿಸಿದರು.









