ಗಾಂಧೀನಗರ: ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಗಾಂಧೀನಗರ ಜಿಲ್ಲೆಯ ಕಲೋಲ್ ನ್ಯಾಯಾಲಯ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ತೀರ್ಪಿನಲ್ಲಿ ಮನುಸ್ಮೃತಿ, ವೇದಗಳು ಸೇರಿದಂತೆ ವಿವಿಧ ಧಾರ್ಮಿಕ ಗ್ರಂಥಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಗೋವುಗಳ ಧಾರ್ಮಿಕ ಮಹತ್ವ ಹಾಗೂ ಅವುಗಳ ಸಂರಕ್ಷಣೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ರಜಪೂತ್ ಅವರು 76 ಪುಟಗಳ ತೀರ್ಪು ಪ್ರಕಟಿಸಿದ್ದಾರೆ. ಈ ತೀರ್ಪು ಗುರುವಾರ ಆನ್ಲೈನ್ನಲ್ಲಿ ಲಭ್ಯವಾಗಿದೆ. ಆರೋಪಿಗಳು ಗೋವುಗಳನ್ನು ಹತ್ಯೆ ಮಾಡಿ, ಅವುಗಳ ದೇಹದ ವಿವಿಧ ಭಾಗಗಳನ್ನು ಕತ್ತರಿಸಿ, ಮಾರಾಟಕ್ಕಾಗಿ 277 ಕೆ.ಜಿ. ಗೋಮಾಂಸವನ್ನು ಹೊರತೆಗೆದಿದ್ದರು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಗೋವುಗಳನ್ನು ತಾಯಿಯ ಸ್ಥಾನದಲ್ಲಿ ಗೌರವಿಸಲಾಗುತ್ತದೆ. ಇಂತಹ ಕೃತ್ಯಗಳಿಗೆ ಕಾರಣರಾದವರಿಗೆ ಕಾನೂನುಬದ್ಧವಾಗಿ ಶಿಕ್ಷೆ ವಿಧಿಸದಿದ್ದರೆ ಮುಂದೊಂದು ದಿನ ಗೋವುಗಳ ಸಂತತಿಯೇ ಅಳಿದುಹೋಗುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ತೀರ್ಪಿನಲ್ಲಿ ಮನುಸ್ಮೃತಿ ಮತ್ತು ವೇದಗಳ ಉಲ್ಲೇಖದ ಮೂಲಕ ಗೋವಿನ ಧಾರ್ಮಿಕ ಮಹತ್ವವನ್ನು ವಿವರಿಸಲಾಗಿದೆ. ಮನುಸ್ಮೃತಿಯಲ್ಲಿ ಗೋವನ್ನು ಧಾರ್ಮಿಕ ಕರ್ತವ್ಯದ ಪ್ರಮುಖ ಆಧಾರಸ್ತಂಭವಾಗಿ ಪರಿಗಣಿಸಲಾಗಿದೆ. ಪಶುಸಂಪತ್ತನ್ನು ರಕ್ಷಿಸುವ ಜವಾಬ್ದಾರಿಯನ್ನು ವೈಶ್ಯ ವರ್ಗಕ್ಕೆ ವಹಿಸಲಾಗಿತ್ತು ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖಿಸಿದೆ.
ಇನ್ನು ಗುಜರಾತ್ ಸರ್ಕಾರ 2011ರಲ್ಲಿ ‘ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯಿದೆ, 1954’ಕ್ಕೆ ತಿದ್ದುಪಡಿ ತಂದು ಗೋಹತ್ಯೆ, ಗೋಮಾಂಸದ ಮಾರಾಟ, ಖರೀದಿ ಹಾಗೂ ಸಾಗಾಟದ ಮೇಲೆ ನಿಷೇಧ ಹೇರಿತ್ತು. 2017ರಲ್ಲಿ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲಾಗಿತ್ತು. ತಿದ್ದುಪಡಿ ಕಾನೂನಿನ ಪ್ರಕಾರ ಗೋಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಗೋಮಾಂಸ ಹೊಂದಿರುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಅಥವಾ ಸಾಗಾಟ ಮಾಡುವುದಕ್ಕೆ ಏಳರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ ಒಂದು ಲಕ್ಷದಿಂದ ಐದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. ಇಂತಹ ಅಪರಾಧಗಳು ಜಾಮೀನುರಹಿತವಾಗಿವೆ.










