ಅಮರಾವತಿ: ಆಂಧ್ರಪ್ರದೇಶ ಹಾಗೂ ಪುದುಚೇರಿಯ ಯಾನಂ ನಡುವಿನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಅರ್ನಾಬ್ ಚಂಡಮಾರುತ ಭಾರಿ ಹಾನಿ ಉಂಟುಮಾಡಿದೆ ಎಂದು ವರದಿಯಾಗಿದೆ. ಚಂಡಮಾರುತದ ಪರಿಣಾಮ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಸಾವಿರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿದ್ದು,
ಸಾವಿರಾರು ಹೆಕ್ಟೇರ್ ಕೃಷಿಭೂಮಿಗೆ ಹಾನಿಯಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಎಂಟು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ.
ಆಂಧ್ರಪ್ರದೇಶದ ಏಲೂರು, ಪಶ್ಚಿಮ ಗೋದಾವರಿ, ಕೋನಸೀಮ, ವಿಜಯನಗರಂ ಹಾಗೂ ವಿಶಾಖಪಟ್ಟಣಂ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳು ಚಂಡಮಾರುತದ ಪ್ರಭಾವಕ್ಕೆ ಒಳಗಾಗಿವೆ. ನೂರಾರು ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ 200 ಮಿಲಿಮೀಟರ್ಗೂ ಅಧಿಕ ಮಳೆ ದಾಖಲಾಗಿದೆ ಎಂದು ತಿಳಿದುಬಂದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ಹಲವು ಕಡೆ ವಿದ್ಯುತ್ ಸರಬರಾಜಿಗೂ ಅಡಚಣೆ ಉಂಟಾಗಿದೆ.
ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ ಮಾತ್ರವಲ್ಲದೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿಯೂ ಮಳೆ ಮತ್ತು ಬಿರುಗಾಳಿಯ ಪ್ರಭಾವ ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ಕರಾವಳಿ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಜೀವಹಾನಿ ತಪ್ಪಿಸಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಅರ್ನಾಬ್ ಚಂಡಮಾರುತವು ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯನ್ನು ದಾಟಿದ ಬಳಿಕ ದುರ್ಬಲಗೊಂಡಿದೆ ಎಂದು ವರದಿಯಾಗಿದೆ. ಆದರೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಒಂದು ದಿನ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿರುವುದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಬಾಪಟ್ಲ, ಗುಂಟೂರು, ಏಲೂರು, ಪೂರ್ವ ಗೋದಾವರಿ, ಕಾಕಿನಾಡ, ಅಲ್ಲೂರಿ ಸೀತಾರಾಮ ರಾಜು, ವಿಶಾಖಪಟ್ಟಣಂ ಹಾಗೂ ವಿಜಯನಗರಂ ಸೇರಿದಂತೆ ಒಟ್ಟು 13 ಜಿಲ್ಲೆಗಳಿಗೆ ಹಠಾತ್ ಪ್ರವಾಹದ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ತಗ್ಗು ಪ್ರದೇಶಗಳು ಹಾಗೂ ನದಿ ತೀರದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಚಂಡಮಾರುತದಿಂದ ಉಂಟಾಗಿರುವ ಹಾನಿಯ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಸಂಭವಿಸಿರುವ ಹಾನಿಯ ಪ್ರಾಥಮಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರದ ತಂಡವನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು 30 ಸಾವಿರಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ. ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ರಸ್ತೆ ಸಂಪರ್ಕ ಮರುಸ್ಥಾಪಿಸುವುದು, ವಿದ್ಯುತ್ ಸರಬರಾಜು ಸರಿಪಡಿಸುವುದು ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ.
ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಆಂಧ್ರಪ್ರದೇಶ ಸರ್ಕಾರ ವಿಶೇಷ ಪರಿಹಾರ ಕ್ರಮಗಳನ್ನು ಘೋಷಿಸಿದೆ. ಚಂಡಮಾರುತದಿಂದ ಬಾಧಿತ ಕುಟುಂಬಗಳಿಗೆ ತಲಾ 25 ಕೆ.ಜಿ. ಅಕ್ಕಿ ಹಾಗೂ ಮೀನುಗಾರರ ಕುಟುಂಬಗಳಿಗೆ 50 ಕೆ.ಜಿ. ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಜನರಿಗೆ ತಲಾ 1,000 ರೂಪಾಯಿ ಹಾಗೂ ಕುಟುಂಬಕ್ಕೆ ಗರಿಷ್ಠ 3,000 ರೂಪಾಯಿವರೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.









