12 ಮಂದಿ ಗಂಭೀರ ಗಾಯಾಳುಗಳು ಕಿಮ್ಸ್ಗೆ ದಾಖಲು, ಟ್ರೇಲರ್ನಡಿ ಸಿಲುಕಿದವರ ರಕ್ಷಣೆಗೆ ಧಾವಿಸಿದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು
ಲಕ್ಷ್ಮೇಶ್ವರ: ಹತ್ತಿ ಬಿಡಿಸುವ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕೃಷಿ ಕೂಲಿಕಾರರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ರೇಲರ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಪಟ್ಟಣದ ಶಿಗ್ಲಿ ರಸ್ತೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಪ್ಯಾಟಿಕೇರಿ ಓಣಿಯ ಕೃಷಿ ಕೂಲಿಕಾರರು ಹತ್ತಿ ಬಿಡಿಸುವ ಕೆಲಸ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಮರಳುತ್ತಿದ್ದಾಗ ಹಿಂಬದಿಯಿಂದ ಬಂದ ಬಸ್ ಟ್ರೇಲರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಟ್ರೇಲರ್ ಪಲ್ಟಿಯಾಗಿದ್ದು, ಕೆಲವರು ರಸ್ತೆಗೆ ಎಸೆಯಲ್ಪಟ್ಟರೆ, ಇನ್ನು ಕೆಲವರು ಟ್ರೇಲರ್ನಡಿ ಸಿಲುಕಿಕೊಂಡರು. ಹಲವರಿಗೆ ಕೈಕಾಲು ಮುರಿತ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ.
ಅನಸೂಯಾ ಹುರಕನವರ, ನಿರ್ಮಲಮ್ಮ ಗದ್ದಿ, ರತ್ನವ್ವ ಬಾಲೆಹೊಸೂರ, ಗಂಗವ್ವ ಹಡಗಲಿ, ರತ್ನವ್ವ ಗದ್ದಿ, ನಿಂಗವ್ವ ಬಾಲೆಹೊಸೂರ, ಹೊನ್ನವ್ವ ಶರಸೂರಿ, ಮಲ್ಲವ್ವ ಗದ್ದಿ, ನಾಗವ್ವ ಶರಶೂರಿ, ನೀಲವ್ವ ಗದ್ದಿ, ಅನಸವ್ವ ಶರಸೂರಿ, ಪಾರವ್ವ ಶರಸೂರಿ, ಕವಿತಾ ಹವಳಣ್ಣವರ ಹಾಗೂ ಮಲ್ಲೇಶಪ್ಪ ಬಸಾಪುರ ಗಾಯಗೊಂಡವರ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಪ್ರಯಾಣಿಕರು, ದಾರಿಹೋಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ರಕ್ಷಣೆಗೆ ಧಾವಿಸಿ ಟ್ರೇಲರ್ನಡಿ ಸಿಲುಕಿದ್ದವರನ್ನು ಹೊರತೆಗೆದರು. ಗಾಯಾಳುಗಳನ್ನು ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಗಂಭೀರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಯಿತು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಗಾಯಾಳುಗಳ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಧಾವಿಸಿದ ಪಿಎಸ್ಐ ಆನಂದ ಕೆ. ಪರಿಸ್ಥಿತಿ ನಿಭಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಅಂಬ್ಯುಲೆನ್ಸ್ ಕೊರತೆ, ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಆಗ್ರಹ
ಒಂದೇ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಾಗ ಅವರನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಅಗತ್ಯ ಅಂಬ್ಯುಲೆನ್ಸ್ಗಳ ಕೊರತೆ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಅಗತ್ಯ ವೈದ್ಯಕೀಯ ಸೌಲಭ್ಯಗಳು, ಸಿಬ್ಬಂದಿ ಹಾಗೂ ಹೆಚ್ಚುವರಿ ಅಂಬ್ಯುಲೆನ್ಸ್ಗಳನ್ನು ಒದಗಿಸಬೇಕು ಎಂಬ ಒತ್ತಾಯ ಮತ್ತೊಮ್ಮೆ ಕೇಳಿಬಂದಿದೆ.










