ಹಾಸನ: ಹಾಸನಾಂಬೆ ದೇವಾಲಯದ ದರ್ಶನಕ್ಕೆ ತಮ್ಮನ್ನು ಅಧಿಕೃತವಾಗಿ ಆಹ್ವಾನಿಸಿಲ್ಲ ಎಂದು ಆರೋಪಿಸಿರುವ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ, ಹಾಸನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವರ್ಷ ಹಾಸನಾಂಬೆ ದರ್ಶನಕ್ಕೆ ತೆರಳದಿರಲು ನಿರ್ಧರಿಸಿರುವುದಾಗಿ ತಿಳಿಸಿರುವ ಅವರು, ಆಹ್ವಾನ ಪತ್ರಿಕೆ ಹಾಗೂ ವಿಶೇಷ ದರ್ಶನದ ಪಾಸ್ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ, ತಾವು ಮೂವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದು, ಮಾಜಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದೇವೆ. ಆದರೆ ಹಾಸನಾಂಬೆ ದರ್ಶನಕ್ಕೆ ಸೂಕ್ತ ರೀತಿಯಲ್ಲಿ ಆಹ್ವಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ನಾನೊಬ್ಬ ಮಾಜಿ ಸಚಿವ. ಮೂವತ್ತು ವರ್ಷ ರಾಜಕೀಯ ಮಾಡಿದ್ದೇನೆ. ಯಾರೋ ಗುಮಾಸ್ತನ ಕೈಯಲ್ಲಿ ಆಹ್ವಾನ ಕೊಡಿಸುತ್ತಾರೆ. ಹೀಗಾಗಿ ಈ ವರ್ಷ ಹಾಸನಾಂಬೆ ದರ್ಶನಕ್ಕೆ ಹೋಗದಿರಲು ತೀರ್ಮಾನಿಸಿದ್ದೇನೆ. ನನ್ನನ್ನು ಕರೆಯದೇ ಇದ್ದಾಗ ನಾನ್ಯಾಕೆ ಹೋಗಬೇಕು?’ ಎಂದು ಪ್ರಶ್ನಿಸಿದರು.
ದೇವಾಲಯಕ್ಕೆ ತೆರಳದಿದ್ದರೂ ಹಾಸನಾಂಬೆಗೆ ಮನೆಯಿಂದಲೇ ಕೈಮುಗಿಯುವುದಾಗಿ ಹೇಳಿದ ರೇವಣ್ಣ, ತಮ್ಮ ತಂದೆ-ತಾಯಿಗೆ ನೋವುಂಟುಮಾಡಿದವರ ವಿರುದ್ಧವೂ ಅಸಮಾಧಾನ ಹೊರಹಾಕಿದರು.
ಹಾಸನಾಂಬೆ ಉತ್ಸವದ ಫ್ಲೆಕ್ಸ್ಗಳಲ್ಲಿ ಜಿಲ್ಲೆಯ ವಿರೋಧ ಪಕ್ಷದ ಶಾಸಕರ ಭಾವಚಿತ್ರಗಳನ್ನು ಹಾಕಿಲ್ಲ ಎಂದು ಆರೋಪಿಸಿದ ಅವರು, ಹಾಸನ ಜಿಲ್ಲೆಯಲ್ಲಿ ಜೆಡಿಎಸ್ನ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಶಾಸಕರಿದ್ದಾರೆ. ಆದರೆ ಯಾರ ಭಾವಚಿತ್ರಕ್ಕೂ ಪ್ರಾಮುಖ್ಯತೆ ನೀಡಿಲ್ಲ. ಹೀಗಾಗಿ ಇದು ಕಾಂಗ್ರೆಸ್ ಕಾರ್ಯಕ್ರಮದಂತೆ ನಡೆಯುತ್ತಿದೆ ಎಂದು ಟೀಕಿಸಿದರು.
ವಿಶೇಷ ದರ್ಶನದ ಪಾಸ್ ಹಂಚಿಕೆಯ ವಿಚಾರದಲ್ಲಿಯೂ ತಾರತಮ್ಯ ನಡೆಯುತ್ತಿದೆ ಎಂದು ರೇವಣ್ಣ ಆರೋಪಿಸಿದರು. ಕೆಲವರ ಮನೆ ಬಾಗಿಲಿಗೆ ತೆರಳಿ ಪಾಸ್ ವಿತರಿಸಲಾಗುತ್ತಿದೆ. ಆದರೆ ತಮಗೆ ಆಹ್ವಾನ ಪತ್ರಿಕೆಯನ್ನೇ ನೀಡಿಲ್ಲ ಎಂದು ದೂರಿದರು.
‘ಎಲ್ಲರಿಗೂ ಸಮಾನವಾಗಿ ಪಾಸ್ ಹಂಚಿಕೆ ಮಾಡಬೇಕು. ಪಾಸ್ ಕೊಡುವುದಾದರೆ ಎಲ್ಲರಿಗೂ ಕೊಡಿ. ಇಲ್ಲವಾದರೆ ಎಲ್ಲರೂ ಸಾಮಾನ್ಯ ಸಾಲಿನಲ್ಲಿ ನಿಂತು ದರ್ಶನ ಪಡೆಯಲಿ’ ಎಂದು ಆಗ್ರಹಿಸಿದರು.
ಪಾಸ್ ವಿತರಣೆಯಲ್ಲಿ ತಾರತಮ್ಯ ಮುಂದುವರಿದರೆ ಬುಧವಾರ ತಮ್ಮ ಕಾರ್ಯಕರ್ತರೊಂದಿಗೆ ದೇವಾಲಯಕ್ಕೆ ತೆರಳುವುದಾಗಿ ಎಚ್ಚರಿಕೆ ನೀಡಿದ ಅವರು, ಜಿಲ್ಲಾಡಳಿತದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆಯಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿನಿಯರು ಚಾಪೆಯ ಮೇಲೆ ಮಲಗುವ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
‘ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಯಾಕೆ ಒದಗಿಸುತ್ತಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ. ಇದನ್ನು ನಾನು ನೋವಿನಿಂದ ಹೇಳುತ್ತಿದ್ದೇನೆ’ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.









