ಬೆಂಗಳೂರು: ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸುವ ಪೊಲೀಸರೇ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ.
ಒನ್ವೇ ರಸ್ತೆಯಲ್ಲಿ ಕೆಎಸ್ಆರ್ಪಿ ಬಸ್ ಚಲಾಯಿಸಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಘಟನೆ ಹೊಸೂರು ರಸ್ತೆಯ ನಂಜಪ್ಪ ಸರ್ಕಲ್ ಬಳಿ ನಡೆದಿದೆ.
ನವೆಂಬರ್ 2ರಂದು ರಾತ್ರಿ ಸುಮಾರು 7 ಗಂಟೆಗೆ ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಕ್ಕಿತಿಮ್ಮನಹಳ್ಳಿ ಮಾರ್ಗವಾಗಿ ನಂಜಪ್ಪ ಸರ್ಕಲ್ ಕಡೆಗೆ ಬಂದ ಕೆಎಸ್ಆರ್ಪಿ ಬಸ್ ಒನ್ವೇ ರಸ್ತೆಯಲ್ಲಿ ಸಂಚರಿಸಿದೆ. ಇದರಿಂದ ಆ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ.
ಈ ವೇಳೆ ರೇಂಜ್ ರೋವರ್ ಕಾರಿನಲ್ಲಿ ಬರುತ್ತಿದ್ದ ಚಾಲಕ, ಬಸ್ ಸಂಚಾರ ನಿಯಮ ಉಲ್ಲಂಘಿಸಿರುವುದನ್ನು ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಎಸ್ಆರ್ಪಿ ಸಿಬ್ಬಂದಿ ಕಾರನ್ನು ತಡೆದು ಸುತ್ತುವರಿದಿದ್ದಾರೆ. ಬಳಿಕ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳದಲ್ಲಿ ಅಶೋಕನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಇದ್ದರೂ ಈ ಘಟನೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರ ವರ್ತನೆಯನ್ನು ಕಾರಿನಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸುವ ಪೊಲೀಸರೇ ನಿಯಮ ಉಲ್ಲಂಘನೆ ಮಾಡಿದರೇ? ಅದನ್ನು ಪ್ರಶ್ನಿಸಿದ ನಾಗರಿಕರೊಂದಿಗೆ ಇಂತಹ ವರ್ತನೆ ಸರಿಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.









