ಬೆಂಗಳೂರು: ಕಚೇರಿಗೆ ನುಗ್ಗಿದ ವ್ಯಕ್ತಿಯೊಬ್ಬ ಯುವತಿಗೆ ಚಾಕು ತೋರಿಸಿ ಚಿನ್ನದ ಸರ ನೀಡುವಂತೆ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನ ದೊಮ್ಮಲೂರಿನಲ್ಲಿ ನಡೆದಿದೆ.
ಅಕ್ಟೋಬರ್ 31ರಂದು ದೊಮ್ಮಲೂರಿನ 100 ಅಡಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಸರಗಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಭುರಾಜ್ ಎಂಬಾತ ಕಚೇರಿಗೆ ನುಗ್ಗಿ ಅಲ್ಲಿದ್ದ ಯುವತಿಯ ಚಿನ್ನದ ಸರವನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಸರ ನೀಡದಿದ್ದರೆ ಚಾಕುವಿನಿಂದ ಇರಿಯುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ವೇಳೆ ಕಚೇರಿಯ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದಾರೆ.
ಆರೋಪಿಯನ್ನು ಹಿಡಿಯಲು ಮುಂದಾದಾಗ ಯುವತಿಯನ್ನು ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಹಿತಿ ಪಡೆದ ಇಂದಿರಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಯುವತಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಸರಗಳ್ಳತನಕ್ಕೆ ಯತ್ನ; ಆರೋಪಿ ನ್ಯಾಯಾಂಗ ಬಂಧನಕ್ಕೆ:
ಘಟನೆ ಕುರಿತು ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಆಮಟೆ ಮಾಹಿತಿ ನೀಡಿದ್ದಾರೆ. ಸರ ಕದಿಯುವ ಉದ್ದೇಶದಿಂದ ಆರೋಪಿ ಕಚೇರಿಗೆ ಬಂದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಾರ್ವಜನಿಕರು ಆತನನ್ನು ಹಿಡಿಯಲು ಮುಂದಾದಾಗ ಯುವತಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆತನ ಹಿನ್ನೆಲೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಭುರಾಜ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿರಬಹುದು ಎಂಬ ಅನುಮಾನವಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.









