ಮಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಮತ್ತೊಂದು ಮಹತ್ವದ ಹಂತ ತಲುಪಿದೆ.
14 ವರ್ಷಗಳ ಹಿಂದೆ ಸಂಗ್ರಹಿಸಲಾಗಿದ್ದ ವೆಜಿನಲ್ ಸ್ವಾಬ್ ಮಾದರಿಯ ಮರುಪರೀಕ್ಷೆ ಇದೀಗ ತನಿಖಾ ತಂಡದ ಗಮನ ಸೆಳೆದಿದೆ. ಈ ಮಾದರಿಯಲ್ಲಿರುವ ಡಿಎನ್ಎ ಸಾಕ್ಷ್ಯ ಪ್ರಕರಣದ ತನಿಖೆಗೆ ಹೊಸ ದಿಕ್ಕು ನೀಡಬಹುದು ಎಂಬ ನಿರೀಕ್ಷೆಯಿದೆ.
2012ರ ಅಕ್ಟೋಬರ್ 10ರಂದು ಪೊಲೀಸರು ಸೌಜನ್ಯ ಅವರ ವೆಜಿನಲ್ ಸ್ವಾಬ್ ಮಾದರಿಯನ್ನು ಸಂಗ್ರಹಿಸಿದ್ದರು. ಬಳಿಕ ಅಕ್ಟೋಬರ್ 20ರಂದು ಬೆಳ್ತಂಗಡಿ ಪೊಲೀಸರು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಆಗಿನ ಪರೀಕ್ಷೆಯಲ್ಲಿ ಮಾದರಿಯಲ್ಲಿ ಫಂಗಸ್ ಪತ್ತೆಯಾಗಿದೆ ಎಂಬ ವರದಿ ಬಂದಿತ್ತು. ಹೀಗಾಗಿ ಡಿಎನ್ಎ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
14 ವರ್ಷಗಳ ಹಳೆಯ ಮಾದರಿಯ ಮರುಪರೀಕ್ಷೆ:
ಇದೀಗ ಅದೇ ಮಾದರಿಯನ್ನು ವಿಶೇಷ ತನಿಖಾ ದಳ (SIT) ಮರುಪರೀಕ್ಷೆಗೆ ಕಳುಹಿಸಿದೆ. ಫಂಗಸ್ ಪತ್ತೆಯಾಗಿದ್ದರೂ ಡಿಎನ್ಎ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿರುವ ಹೈದರಾಬಾದ್ನ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಈ ಪರೀಕ್ಷೆ ನಡೆಯುತ್ತಿದೆ.
ಕಳೆದ ಏಳೆಂಟು ದಿನಗಳ ಹಿಂದೆಯೇ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ತನಿಖಾ ತಂಡ ವರದಿಗಾಗಿ ಕಾಯುತ್ತಿದೆ. ಪರೀಕ್ಷೆಯಲ್ಲಿ ಡಿಎನ್ಎ ಮಾದರಿ ಪತ್ತೆಯಾದರೆ, ಅದನ್ನು ಪ್ರಕರಣದ ಈಗಿನ ಆರೋಪಿಗಳ ಡಿಎನ್ಎ ಜೊತೆ ಹೋಲಿಕೆ ಮಾಡಿ ತನಿಖೆ ಮುಂದುವರಿಸಲು ಎಸ್ಐಟಿ ಯೋಜಿಸಿದೆ.
ವರದಿಯಿಂದ ಸೌಜನ್ಯ ಸಾವಿನ ರಹಸ್ಯ ಬಯಲಾಗುತ್ತಾ?
ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ಹಲವು ಹೊಸ ಮಾಹಿತಿಗಳನ್ನು ಕಲೆಹಾಕುತ್ತಿರುವ ಎಸ್ಐಟಿ, ಈ ಹಳೆಯ ಮಾದರಿಯ ವರದಿಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಉಪಯುಕ್ತ ಡಿಎನ್ಎ ಸಾಕ್ಷ್ಯ ಲಭ್ಯವಾದರೆ, ಪ್ರಕರಣದ ತನಿಖೆಗೆ ಮಹತ್ವದ ಸುಳಿವು ಸಿಗಬಹುದು.
ಆದರೆ, ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ಡಿಎನ್ಎ ಪತ್ತೆಯಾಗುತ್ತದೆಯೇ? ಅದು ಯಾರದ್ದಕ್ಕೆ ಹೊಂದಿಕೆಯಾಗುತ್ತದೆ? 14 ವರ್ಷಗಳ ಹಿಂದಿನ ಈ ಮಾದರಿ ಸೌಜನ್ಯ ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ತಿರುವು ನೀಡುತ್ತದೆಯೇ? ಎಂಬ ಪ್ರಶ್ನೆಗಳಿಗೆ ವರದಿ ಬಂದ ಬಳಿಕವೇ ಉತ್ತರ ಸಿಗಲಿದೆ.










