ಬೆಳಗಾವಿ: ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಪ್ರೇಯಸಿಯನ್ನು ಸುತ್ತಾಡಲು ಕರೆದುಕೊಂಡು ಹೋಗಿದ್ದ ಪ್ರಿಯಕರನೇ ಆಕೆಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಕೊಲೆ ಮಾಡಿದ ಬಳಿಕ ಏನೂ ತಿಳಿಯದವನಂತೆ ಯುವತಿಯ ಕುಟುಂಬದವರೊಂದಿಗೆ ಹುಡುಕಾಟ ನಡೆಸಿದ್ದಾನೆ ಎನ್ನಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಯುವತಿಯನ್ನು ಹಾರೋಗೇರಿ ಗ್ರಾಮದ ರಕ್ಷಿತಾ ಸರಿಕರ್ (23) ಎಂದು ಗುರುತಿಸಲಾಗಿದೆ. ಕೇಂದ್ರ ಸಶಸ್ತ್ರ ಸೀಮಾ ಬಲದ ಪೇದೆ ಬಸಪ್ಪ ಸಾತನ್ನವಣ್ಣರ್ ಬಂಧಿತ ಆರೋಪಿ. ರಕ್ಷಿತಾ ಹಾಗೂ ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸುತ್ತಾಡಲು ಕರೆದುಕೊಂಡು ಹೋಗಿ ಪ್ರೇಯಸಿಯ ಹತ್ಯೆ!
ಅಕ್ಟೋಬರ್ 28ರಂದು ಬಸಪ್ಪ ತನ್ನ ಪ್ರೇಯಸಿ ರಕ್ಷಿತಾಳನ್ನು ಸುತ್ತಾಡಲು ಹೋಗೋಣ ಎಂದು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನೇ ಪ್ರಿಯಕರ ಹತ್ಯೆ ಮಾಡಿರುವ ಘಟನೆ ಆಘಾತ ಮೂಡಿಸಿದೆ. ಆದರೆ ಕೊಲೆಗೆ ನಿಖರವಾದ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಕೊಲೆ ಮಾಡಿ ಯುವತಿಯ ಹುಡುಕಾಟದ ನಾಟಕ!
ರಕ್ಷಿತಾಳನ್ನು ಕೊಲೆ ಮಾಡಿದ ಬಳಿಕ ಆರೋಪಿ ಬಸಪ್ಪ ಏನೂ ನಡೆದಿಲ್ಲ ಎಂಬಂತೆ ಊರಿಗೆ ಮರಳಿದ್ದಾನೆ ಎಂದು ತಿಳಿದುಬಂದಿದೆ. ಯುವತಿ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು.
ಈ ವೇಳೆ ಆರೋಪಿ ಬಸಪ್ಪ ಕೂಡ ರಕ್ಷಿತಾಳ ಸಹೋದರನೊಂದಿಗೆ ಸೇರಿಕೊಂಡು ಆಕೆಯನ್ನು ಹುಡುಕುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿರುವ ವಿಚಾರ ಯಾರಿಗೂ ತಿಳಿಯಬಾರದು ಎಂಬ ಉದ್ದೇಶದಿಂದ ಆತ ಈ ರೀತಿ ವರ್ತಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ!
ರಕ್ಷಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ರಕ್ಷಿತಾಳ ಪ್ರಿಯಕರ ಬಸಪ್ಪನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ರಕ್ಷಿತಾಳನ್ನು ತಾನೇ ಕೊಲೆ ಮಾಡಿರುವುದಾಗಿ ಬಸಪ್ಪ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಮೂಲಕ ಯುವತಿಯ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ ಘಟನೆ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಸಪ್ಪ ಸಾತನ್ನವಣ್ಣರ್ನನ್ನು ಪೊಲೀಸರು ಬಂಧಿಸಿದ್ದಾರೆ.









