ಅಲ್ ಎಮಿರೇಟ್ಸ್ ಮೈದಾನದಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ಯುವ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಆರ್ಯವೀರ್ ಸೆಹ್ವಾಗ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿದೆ.

ನೇಪಾಳದ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಆರ್ಯವೀರ್, ಕೇವಲ 52 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಗಮನ ಸೆಳೆದರು. ತಮ್ಮ ಇನ್ನಿಂಗ್ಸ್ನಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳನ್ನು ಬಾರಿಸಿದ ಆರ್ಯವೀರ್, ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಆರ್ಯವೀರ್-ಲಕ್ಷ್ಯ ಭರ್ಜರಿ ಜೊತೆಯಾಟ
ನಾಯಕ ಲಕ್ಷ್ಯ ರಾಯ್ಚಂದಾನಿ ಜೊತೆಗೂಡಿದ ಆರ್ಯವೀರ್ ಸೆಹ್ವಾಗ್ ನೇಪಾಳದ ಬೌಲರ್ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಲಕ್ಷ್ಯ ಅಜೇಯ 53 ರನ್ ಗಳಿಸಿದರೆ, ಆರ್ಯವೀರ್ ಅಜೇಯ 70 ರನ್ ಸಿಡಿಸಿದರು. ಈ ಜೋಡಿ ಮುರಿಯದ 129 ರನ್ಗಳ ಜೊತೆಯಾಟವಾಡಿ ಭಾರತಕ್ಕೆ 10 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿತು.
ಬೌಲಿಂಗ್ನಲ್ಲೂ ಭಾರತದ ಪ್ರಾಬಲ್ಯ
ಬ್ಯಾಟಿಂಗ್ನಲ್ಲಿ ಆರ್ಯವೀರ್ ಮಿಂಚಿದರೆ, ಬೌಲಿಂಗ್ನಲ್ಲಿ ಇಶಾನ್ ಸೂದ್ ಭಾರತದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ತಮ್ಮ 10 ಓವರ್ಗಳಲ್ಲಿ ಕೇವಲ 18 ರನ್ ನೀಡಿ ಮೂರು ವಿಕೆಟ್ ಕಬಳಿಸುವ ಮೂಲಕ ನೇಪಾಳದ ಅಗ್ರ ಕ್ರಮಾಂಕದ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿದರು.
ಸ್ಪಿನ್ನರ್ ಅರ್ಜುನ್ ರಜಪೂತ್ ಎಂಟು ರನ್ ನೀಡಿ ಮೂರು ವಿಕೆಟ್ ಪಡೆದರು. ಯಶ್ವೀರ್ ಗೌಡ್ ಎರಡು ವಿಕೆಟ್ ಕಬಳಿಸಿದರೆ, ಕಾವ್ಯ ಪಟೇಲ್ ಹಾಗೂ ಮನಾಲ್ ಚೌಹಾಣ್ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.
ನವೆಂಬರ್ 8ರಂದು ಪಾಕಿಸ್ತಾನದ ವಿರುದ್ಧ ಕಾದಾಟ
ನೇಪಾಳ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಭಾರತಕ್ಕೆ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನದ ಸವಾಲು ಎದುರಾಗಲಿದೆ. ನವೆಂಬರ್ 8ರಂದು ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಟೂರ್ನಿಯಲ್ಲಿ ಪಾಕಿಸ್ತಾನ ಅಂಡರ್-19 ತಂಡ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಹಿನ್ನೆಲೆಯಲ್ಲಿ ಈ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದೆ. ನೇಪಾಳ ವಿರುದ್ಧ ಬ್ಯಾಟ್ನಿಂದ ಅಬ್ಬರಿಸಿರುವ ಆರ್ಯವೀರ್ ಸೆಹ್ವಾಗ್ ಹಾಗೂ ನಾಯಕ ಲಕ್ಷ್ಯ ರಾಯ್ಚಂದಾನಿ ಪಾಕಿಸ್ತಾನದ ವಿರುದ್ಧವೂ ಇದೇ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ಇಶಾನ್ ಸೂದ್ ಮೇಲೂ ಹೆಚ್ಚಿನ ಜವಾಬ್ದಾರಿ ಇರಲಿದೆ.










