ಬೆಂಗಳೂರು ಗ್ರಾಮಾಂತರ: ಅತಿವೇಗವಾಗಿ ಬಂದ ಫಾರ್ಚುನರ್ ಕಾರು ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿ ನಡೆದಿದೆ. ಅಪಘಾತದ ಬಳಿಕ ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಕಿಲೋಮೀಟರ್ಗಟ್ಟಲೆ ಬೆನ್ನಟ್ಟಿ ಬಂಧಿಸಿದ್ದಾರೆ. ಈ ರೋಚಕ ಚೇಸಿಂಗ್ ದೃಶ್ಯ ಪೊಲೀಸರ ಮೊಬೈಲ್ನಲ್ಲಿ ಸೆರೆಯಾಗಿದೆ.

ದೇವನಹಳ್ಳಿ ತಾಲ್ಲೂಕಿನ ಅತ್ತಿಬೆಲೆ ಸಮೀಪ ರಾತ್ರಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದೇವನಹಳ್ಳಿ ಪಟ್ಟಣದ ನಿವಾಸಿಗಳಾದ ಮಿಥುನ್ ಹಾಗೂ ಕನಕ ಮೃತಪಟ್ಟ ದುರ್ದೈವಿಗಳು. ಇಬ್ಬರೂ ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಮೊಟ್ಟೆ ಮತ್ತು ಚಿಕನ್ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ರಾತ್ರಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದ ಬಳಿಕ ಕಾರು ಚಾಲಕ ವಾಹನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸುವ ಬದಲು ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಅಪಘಾತದ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಬಿದ್ದಿತ್ತು. ಇದೇ ನಂಬರ್ ಪ್ಲೇಟ್ ಪೊಲೀಸರಿಗೆ ಪ್ರಮುಖ ಸುಳಿವಾಗಿದ್ದು, ಅದರ ಆಧಾರದ ಮೇಲೆ ಕಾರಿನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಫಾರ್ಚುನರ್ ಕಾರು ಚಿಕ್ಕಬಳ್ಳಾಪುರ ಮಾರ್ಗವಾಗಿ ತೆಲಂಗಾಣದತ್ತ ತೆರಳುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಬೆನ್ನಟ್ಟಲು ಆರಂಭಿಸಿದ್ದಾರೆ. ಸೈರನ್ ಹಾಕಿ ವಾಹನ ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾನೆ.
ಈ ವೇಳೆ ಪರಾರಿಯಾಗುತ್ತಿದ್ದ ಕಾರನ್ನು ತಡೆಯಲು ಪೊಲೀಸರು ಬೊಲೆರೋ ಗೂಡ್ಸ್ ವಾಹನವನ್ನು ಅಡ್ಡಲಾಗಿ ನಿಲ್ಲಿಸಿದ್ದರು. ಆದರೂ ಚಾಲಕ ಕಾರು ನಿಲ್ಲಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರ ಸೂಚನೆಗಳನ್ನು ಲೆಕ್ಕಿಸದೆ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಹಿಡಿಯಲು ಪೊಲೀಸರು ಕಿಲೋಮೀಟರ್ಗಟ್ಟಲೆ ಬೆನ್ನಟ್ಟಿದ್ದಾರೆ.
ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದ್ದು, ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಪೊಲೀಸರು ಆತನನ್ನು ಹಿಡಿಯಲು ನಿರಂತರವಾಗಿ ಬೆನ್ನಟ್ಟಿದ್ದಾರೆ. ಕೊನೆಗೆ ಇತರ ವಾಹನಗಳ ನೆರವಿನಿಂದ ಫಾರ್ಚುನರ್ ಕಾರನ್ನು ತಡೆದು ಚಾಲಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರದ ಸಮೀಪ ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಪಘಾತದ ಸ್ಥಳದಿಂದ ತಪ್ಪಿಸಿಕೊಂಡು ತೆಲಂಗಾಣದತ್ತ ತೆರಳುತ್ತಿದ್ದ ಚಾಲಕನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ವಿಶೇಷವೆಂದರೆ, ಪೊಲೀಸರು ಕಾರನ್ನು ಬೆನ್ನಟ್ಟಿದ ಸಂಪೂರ್ಣ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸೈರನ್ ಹಾಕಿಕೊಂಡು ಫಾರ್ಚುನರ್ ಕಾರನ್ನು ಬೆನ್ನಟ್ಟುವುದು, ವಾಹನ ನಿಲ್ಲಿಸುವಂತೆ ಸೂಚಿಸುವುದು ಹಾಗೂ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸುವ ದೃಶ್ಯಗಳು ದಾಖಲಾಗಿವೆ.
ಸದ್ಯ ಈ ಅಪಘಾತ ಪ್ರಕರಣ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಇಬ್ಬರು ಬೈಕ್ ಸವಾರರ ಸಾವಿಗೆ ಕಾರಣವಾದ ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.









