ಹಾಸನ: ಹಾಸನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಲಂಚದ ಆರೋಪ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಲತಾಕುಮಾರಿ ಆರೋಪಗಳನ್ನು ತಳ್ಳಿಹಾಕಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಕೂಡ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಒಂದು ಪೈಸೆಯನ್ನೂ ಪಡೆದಿಲ್ಲ ಎಂದು ಹಾಸನಾಂಬೆ ದೇವಿಯ ಮೇಲೆ ಆಣೆ ಮಾಡಿ ಹೇಳಿರುವ ಸಚಿವರು, ಆರೋಪ ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ. ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ, ಹಾಸನಾಂಬೆ ಜಾತ್ರೆಯ ಸಂದರ್ಭದಲ್ಲಿ ಇಂತಹ ಆರೋಪ ಕೇಳಿಬಂದಿರುವುದು ಆಘಾತ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ನಾನು ಒಂದು ಪೈಸೆ ಮುಟ್ಟಿದ್ದರೂ ಹಾಸನಾಂಬೆ ತಾಯಿ ನನ್ನನ್ನು ನೋಡಿಕೊಳ್ಳಲಿ. ಇಲ್ಲದಿದ್ದರೆ ಆರೋಪ ಮಾಡಿದವರನ್ನು ತಾಯಿಯೇ ನೋಡಿಕೊಳ್ಳಲಿ ಎಂದು ಆಣೆ ಮಾಡಿ ಹೇಳಿದ್ದಾರೆ.
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಾಟ್ಸಾಪ್ ಚಾಟ್ಗಳ ಸತ್ಯಾಸತ್ಯತೆ ಕುರಿತು ಪ್ರಶ್ನಿಸಿದ ಶಿವಲಿಂಗೇಗೌಡ, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿ ಬರುವವರೆಗೆ ಈ ವಿಚಾರದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ 15 ದಿನಗಳಲ್ಲಿ ಎಫ್ಎಸ್ಎಲ್ ವರದಿ ಬರಲಿದೆ. ಆ ಬಳಿಕ ವಾಸ್ತವಾಂಶಗಳು ತಿಳಿಯಲಿವೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಾಟ್ಸಾಪ್ ಸಂಭಾಷಣೆಯ ಪ್ರತಿಯಲ್ಲಿ ಸಂಬಂಧಪಟ್ಟ ವ್ಯಕ್ತಿಯ ಮೊಬೈಲ್ ಸಂಖ್ಯೆ ಕಾಣಿಸುತ್ತಿಲ್ಲ. ಕೇವಲ ಹೆಸರು ಮಾತ್ರ ಕಾಣಿಸುತ್ತಿದೆ. ಆ ಸಂಭಾಷಣೆಯಲ್ಲಿ ಮಾತನಾಡಿರುವ ಮತ್ತೊಬ್ಬ ವ್ಯಕ್ತಿ ಯಾರು ಎಂಬುದೂ ಸ್ಪಷ್ಟವಾಗಿಲ್ಲ. ಹೀಗಿರುವಾಗ ಆ ಚಾಟ್ಗಳನ್ನು ಆಧಾರವಾಗಿಟ್ಟುಕೊಂಡು ಆರೋಪ ಮಾಡುವುದು ಎಷ್ಟು ಸರಿ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಇಂದಿನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಯುಗದಲ್ಲಿ ಯಾರ ಹೆಸರಿನಲ್ಲಾದರೂ ನಕಲಿ ಸಂಭಾಷಣೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಯಾವುದೇ ದೃಢವಾದ ಆಧಾರವಿಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದು ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಾಟ್ಸಾಪ್ ಚಾಟ್ಗಳನ್ನು ಕುಮಾರಸ್ವಾಮಿ ಅವರಿಗೆ ತಂದುಕೊಟ್ಟವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಯಾರು ಯಾರೊಂದಿಗೆ ಮಾತನಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಈ ಮಾಹಿತಿಗಳನ್ನು ಧೈರ್ಯವಾಗಿ ಬಹಿರಂಗಪಡಿಸಿದರೆ ಅವರ ಘನತೆ ಹೆಚ್ಚುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಚಾಟ್ಗಳನ್ನು ಎಫ್ಎಸ್ಎಲ್ ಪರಿಶೀಲನೆಗೆ ಕಳುಹಿಸಲಾಗುತ್ತದೆ. ವರದಿ ಬಂದ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ. ಒಂದು ವೇಳೆ ಆರೋಪಗಳು ಸುಳ್ಳೆಂದು ಸಾಬೀತಾದರೆ ಕುಮಾರಸ್ವಾಮಿ ಅವರ ಗೌರವ ಏನಾಗುತ್ತದೆ ಎಂದು ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಕಾನೂನು ಪ್ರಕಾರವೇ ಪ್ರಕರಣವನ್ನು ಎದುರಿಸಲಾಗುವುದು. ಇದರಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಕಾನೂನಿನ ಮುಂದೆ ಸಿಕ್ಕಿಬೀಳುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ರಾಜಕೀಯವಾಗಿಯೂ ವಾಗ್ದಾಳಿ ನಡೆಸಿದ ಶಿವಲಿಂಗೇಗೌಡ, ನೀವು ಕೇಂದ್ರ ಸಚಿವರಾಗಿದ್ದರೂ ಹಾಸನ ಜಿಲ್ಲೆಗೆ ಒಂದೇ ಒಂದು ಕೈಗಾರಿಕೆ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ವಿಚಾರವನ್ನು ಪ್ರಸ್ತಾಪಿಸಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರು ಆರೋಪ ಮಾಡಿ ನಂತರ ಅದರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಹಿಟ್ ಆ್ಯಂಡ್ ರನ್ ರೀತಿಯ ಆರೋಪ ಮಾಡುವ ಪ್ರವೃತ್ತಿಯಾಗಿದೆ ಎಂದು ಶಿವಲಿಂಗೇಗೌಡ ಟೀಕಿಸಿದ್ದಾರೆ.








