ಹುಬ್ಬಳ್ಳಿ/ಬೆಳಗಾವಿ: ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗಳಿಗೆ ಸರಣಿ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂದು (ನವೆಂಬರ್ 9) ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಅಧಿಕೃತ ಇ-ಮೇಲ್ ವಿಳಾಸಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪಾಲಿಕೆ ಕಚೇರಿಗಳಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಅಧಿಕೃತ ಇ-ಮೇಲ್‌ಗೆ ಅಪರಿಚಿತರಿಂದ ಬೆದರಿಕೆ ಸಂದೇಶ ಬಂದಿದೆ. ಪಾಲಿಕೆ ಕಟ್ಟಡದಲ್ಲಿ ಬಾಂಬ್ ಇರಿಸಲಾಗಿದ್ದು, ಮಧ್ಯಾಹ್ನ 1.15ಕ್ಕೆ ಸ್ಫೋಟಿಸಲಾಗುವುದು ಎಂದು ಇ-ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ. ಈ ಸಂದೇಶ ಬಂದ ಬೆನ್ನಲ್ಲೇ ಪಾಲಿಕೆ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಾರ್ಕೆಟ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕಾಲಿಮಿರ್ಜಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯೊಂದಿಗೆ ಪಾಲಿಕೆ ಕಚೇರಿಯ ಒಳಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗಿದೆ.
ಇನ್ನೊಂದೆಡೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೂ ಇಂದು ಬೆಳಗ್ಗೆ 11.35ರ ಸುಮಾರಿಗೆ ಬೆದರಿಕೆ ಇ-ಮೇಲ್ ಬಂದಿದೆ. ‘ವೆಯಿಟ್ ಸ್ಮಿತ್’ ಎಂಬ ಹೆಸರಿನ ಇ-ಮೇಲ್ ಐಡಿಯಿಂದ ಸಂದೇಶ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಇ-ಮೇಲ್‌ನಲ್ಲಿ ಹುಬ್ಬಳ್ಳಿ ಪಾಲಿಕೆ ಕಚೇರಿಗೆ ಬೆದರಿಕೆ ಹಾಕಿರುವುದರ ಜೊತೆಗೆ ಹಲವು ಪ್ರಮುಖ ಸ್ಥಳಗಳು ಹಾಗೂ ಕಾರ್ಯಕ್ರಮಗಳನ್ನೂ ಉಲ್ಲೇಖಿಸಲಾಗಿದೆ.
ಬೆದರಿಕೆ ಸಂದೇಶದಲ್ಲಿ ‘Khalistan National Army’ ಹಾಗೂ ‘Babbar Khalsa (Parmar-Canada)’ ಸಂಘಟನೆಗಳ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ, 1984ರ ಸಿಖ್ ನರಮೇಧದ ವಿಚಾರವನ್ನೂ ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ. ಆದರೆ ಈ ಇ-ಮೇಲ್ ಕಳುಹಿಸಿದವರ ಗುರುತು ಹಾಗೂ ಉಲ್ಲೇಖಿತ ಸಂಘಟನೆಗಳೊಂದಿಗೆ ಅವರಿಗೆ ನಿಜವಾಗಿಯೂ ಸಂಪರ್ಕವಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ವಿಶೇಷವೆಂದರೆ, ನವೆಂಬರ್ 29ರಂದು ಬೆಂಗಳೂರಿನ ನೈಸ್ ಸೆಂಟರ್ ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೂ ಬಾಂಬ್ ಬೆದರಿಕೆ ಹಾಕಲಾಗಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಐಇಡಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಅಂದು ಸಾರ್ವಜನಿಕರು ನೈಸ್ ಗ್ರೌಂಡ್ಸ್‌ಗೆ ತೆರಳಬಾರದು ಎಂಬ ಬೆದರಿಕೆಯ ಸಂದೇಶವನ್ನೂ ಕಳುಹಿಸಲಾಗಿದೆ.
ಇಷ್ಟೇ ಅಲ್ಲದೆ, ರಸ್ತೆಯಲ್ಲಿ ಐಫೋನ್ ಕಂಡುಬಂದರೆ ಅದನ್ನು ಮುಟ್ಟಬಾರದು ಎಂಬ ಸೂಚನೆಯನ್ನೂ ಬೆದರಿಕೆ ಇ-ಮೇಲ್‌ನಲ್ಲಿ ನೀಡಲಾಗಿದೆ. ಈ ರೀತಿಯ ಹಲವು ಆತಂಕಕಾರಿ ವಿಷಯಗಳನ್ನು ಸಂದೇಶದಲ್ಲಿ ಉಲ್ಲೇಖಿಸಿರುವುದು ಗಮನ ಸೆಳೆದಿದೆ.
ಇದರ ಜೊತೆಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ನಿವಾಸ ಹಾಗೂ ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೂ ಸ್ಫೋಟದ ಬೆದರಿಕೆ ಹಾಕಲಾಗಿದೆ. ನವೆಂಬರ್ 27ರಂದು ಅಮಿತಾಭ್ ಬಚ್ಚನ್ ಅವರ ಮನೆಯ ಸಮೀಪ ಹಾಗೂ ನವೆಂಬರ್ 29ರಂದು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಾಹ್ನ 3.11ರಿಂದ ರಾತ್ರಿ 11.11ರ ನಡುವಿನ ಅವಧಿಯನ್ನೂ ಬೆದರಿಕೆ ಇ-ಮೇಲ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿಯೂ ಪೊಲೀಸರು ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆದರಿಕೆ ಸಂದೇಶಗಳ ಹಿನ್ನೆಲೆಯಲ್ಲಿ ಎರಡೂ ನಗರಗಳ ಪಾಲಿಕೆ ಕಚೇರಿಗಳಲ್ಲಿ ಭದ್ರತಾ ತಪಾಸಣೆ ಚುರುಕುಗೊಂಡಿದೆ.









