ಗದಗ: ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿರುವ ನಡುವೆಯೇ ಗದಗ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಮಾದರಿಯಾಗಿದೆ. ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬವೊಂದು ಕಳೆದ 35 ವರ್ಷಗಳಿಂದ ದೀಪಾವಳಿ ಹಬ್ಬದಂದು ಲಕ್ಷ್ಮೀದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದೆ. ಮೂರು ತಲೆಮಾರುಗಳಿಂದ ಮುಂದುವರಿದಿರುವ ಈ ಆಚರಣೆ ಧಾರ್ಮಿಕ ಸಾಮರಸ್ಯ ಹಾಗೂ ಪರಸ್ಪರ ಗೌರವದ ಸಂದೇಶ ಸಾರುತ್ತಿದೆ.

ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಸಮೀಪ ವಾಸಿಸುವ ಕುತ್ಬುದ್ದೀನ್ ಗಡಾದ ಅವರ ಕುಟುಂಬ ಈ ವಿಶಿಷ್ಟ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ಸುಮಾರು ಮೂರುವರೆ ದಶಕಗಳಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಕುಟುಂಬದ ಸದಸ್ಯರು, ಲಕ್ಷ್ಮೀದೇವಿಗೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸುವ ಮೂಲಕ ಹಿಂದೂ ಬಾಂಧವರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.
ಕುತ್ಬುದ್ದೀನ್ ಗಡಾದ ಅವರು ಸಣ್ಣ ಸೈಕಲ್ ಅಂಗಡಿಯ ಮೂಲಕ ತಮ್ಮ ಜೀವನ ಆರಂಭಿಸಿದ್ದರು. ಪ್ರಸ್ತುತ ಸೈಕಲ್, ಮೋಟಾರ್ ವಾಹನ ಹಾಗೂ ಟ್ರ್ಯಾಕ್ಟರ್ಗಳ ಟೈರ್ ಪಂಚರ್ ದುರಸ್ತಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ದಿನನಿತ್ಯದ ದುಡಿಮೆಯ ನಡುವೆಯೂ ಪ್ರತಿವರ್ಷ ದೀಪಾವಳಿ ಹಬ್ಬದಂದು ಲಕ್ಷ್ಮೀ ಪೂಜೆ ಮಾಡುವ ಸಂಪ್ರದಾಯವನ್ನು ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ಕುತ್ಬುದ್ದೀನ್ ಅವರ ಅಂಗಡಿಯಲ್ಲಿ ಹಬ್ಬದ ಸಿದ್ಧತೆಗಳು ಆರಂಭವಾಗುತ್ತವೆ. ಅಂಗಡಿಯನ್ನು ಸ್ವಚ್ಛಗೊಳಿಸಿ ವಿಶೇಷ ಮಂಟಪ ನಿರ್ಮಿಸಲಾಗುತ್ತದೆ. ವಿದ್ಯುತ್ ದೀಪಗಳು, ಹೂವುಗಳು ಹಾಗೂ ತಳಿರು ತೋರಣಗಳಿಂದ ಅಂಗಡಿಯನ್ನು ಅಲಂಕರಿಸಲಾಗುತ್ತದೆ. ಹಣತೆಗಳ ನಡುವೆ ಲಕ್ಷ್ಮೀದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹೊಸ ಸೀರೆಯನ್ನು ಉಡಿಸಿ ವಿಶೇಷವಾಗಿ ಶೃಂಗರಿಸಲಾಗುತ್ತದೆ.
ಹಬ್ಬದ ದಿನ ಹಿಂದೂ ಸ್ವಾಮಿಗಳನ್ನು ಆಹ್ವಾನಿಸಿ ಮಂತ್ರೋಚ್ಚಾರಣೆ, ಆರತಿ ಹಾಗೂ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಜೊತೆಗೆ ಗ್ರಾಮದ ವ್ಯಾಪಾರಸ್ಥರು, ಸ್ನೇಹಿತರು ಹಾಗೂ ಹಿಂದೂ ಬಾಂಧವರು ಭಾಗವಹಿಸುತ್ತಾರೆ. ಎಲ್ಲರೂ ಒಟ್ಟಾಗಿ ಪೂಜೆಯಲ್ಲಿ ಪಾಲ್ಗೊಂಡು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ವಿಶೇಷವೆಂದರೆ ಲಕ್ಷ್ಮೀ ಪೂಜೆಯ ನಂತರ ಆಗಮಿಸಿದವರಿಗೆ ಭೋಜನದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಕಡುಬು, ಕಡಲೆಕಾಯಿ ಪಲ್ಯ, ಕಾಳು ಪಲ್ಯ, ಚಟ್ನಿ, ಹಪ್ಪಳ ಹಾಗೂ ಸಂಡಿಗೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ಅತಿಥಿಗಳಿಗೆ ಬಡಿಸಲಾಗುತ್ತದೆ. ಆರಂಭದಲ್ಲಿ ಕೆಲವೇ ಜನರಿಗೆ ಸೀಮಿತವಾಗಿದ್ದ ಈ ಭೋಜನ ವ್ಯವಸ್ಥೆ, ಇದೀಗ ವಿವಿಧ ಸಮುದಾಯಗಳ ಬಂಧುಗಳು ಹಾಗೂ ಸ್ನೇಹಿತರು ಒಂದೆಡೆ ಸೇರುವ ಸೌಹಾರ್ದದ ಕಾರ್ಯಕ್ರಮವಾಗಿ ಬೆಳೆದಿದೆ.
ಕುತ್ಬುದ್ದೀನ್ ಅವರ ಪತ್ನಿ ರಜಮಾ ಬೇಗಂ, ಮಕ್ಕಳಾದ ಕಾಶಿಂಸಾಬ, ಫಜಲ್ ಅಹ್ಮದ್, ನಜೀರ್ ಅಹ್ಮದ್, ಸಫರಾ ಬೇಗಂ, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ದೀಪಾವಳಿ ಆಚರಣೆಯಲ್ಲಿ ಭಾಗಿಯಾಗುತ್ತದೆ. ಹಿರಿಯರು ಆರಂಭಿಸಿದ ಈ ಸಂಪ್ರದಾಯವನ್ನು ಕಿರಿಯ ತಲೆಮಾರಿನವರೂ ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಈ ಕುಟುಂಬ ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮದ ದರ್ಗಾದ ಉರುಸ್, ಗಂಧದ ಆಚರಣೆ ಹಾಗೂ ಮೊಹರಂ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತದೆ. ತಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಹಿಂದೂ ಬಾಂಧವರನ್ನು ಆಹ್ವಾನಿಸುವ ಕುಟುಂಬದ ಸದಸ್ಯರು, ಹಿಂದೂಗಳ ಹಬ್ಬಗಳಲ್ಲಿಯೂ ಆತ್ಮೀಯವಾಗಿ ಪಾಲ್ಗೊಳ್ಳುತ್ತಾರೆ. ಪರಸ್ಪರರ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗಳಿಗೆ ಗೌರವ ನೀಡುವ ಮೂಲಕ ಗ್ರಾಮದಲ್ಲಿ ಸೌಹಾರ್ದದ ವಾತಾವರಣಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಈ ಕುರಿತು ವಿಜಯಸಾಕ್ಷಿ ಪತ್ರಿಕೆಯೊಂದಿಗೆ ಮಾತನಾಡಿರುವ ಕುತ್ಬುದ್ದೀನ್ ಗಡಾದ, ಕಳೆದ 35 ವರ್ಷಗಳಿಂದ ದೀಪಾವಳಿಯಂದು ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುತ್ತಿದ್ದೇವೆ. ಪ್ರತಿವರ್ಷ ಸ್ವಾಮಿಗಳನ್ನು ಆಹ್ವಾನಿಸಿ ಮಂತ್ರೋಚ್ಚಾರಣೆಯೊಂದಿಗೆ ಪೂಜೆ ಮಾಡಿಸುತ್ತೇವೆ. ವ್ಯಾಪಾರಸ್ಥರು, ಗ್ರಾಮದ ಹಿಂದೂ ಬಾಂಧವರು ಹಾಗೂ ಇತರರು ಪೂಜೆಯಲ್ಲಿ ಭಾಗವಹಿಸಿ ಸಂತೋಷದಿಂದ ಊಟ ಮಾಡಿ ತೆರಳುತ್ತಾರೆ ಎಂದು ತಿಳಿಸಿದ್ದಾರೆ.
ತಮ್ಮ ಕುಟುಂಬದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದಭಾವವಿಲ್ಲ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಗೌರವದಿಂದ ಒಟ್ಟಾಗಿ ಬದುಕಬೇಕು ಎಂಬುದೇ ತಮ್ಮ ಆಶಯವಾಗಿದೆ ಎಂದು ಕುತ್ಬುದ್ದೀನ್ ಗಡಾದ ಹೇಳಿದ್ದಾರೆ.








