ಗದಗ: ದೀಪಾವಳಿ ಹಬ್ಬದ ಸಂದರ್ಭದಲ್ಲಿ 65 ವರ್ಷಗಳಿಂದ ಗುಡಿಸಲಿನಲ್ಲಿ ವಾಸವಿದ್ದ ಮಹಿಳೆಯೊಬ್ಬರಿಗೆ ಸರ್ಕಾರಿ ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದು, ಶಾಸಕ ಎಚ್.ಕೆ. ಪಾಟೀಲ ಅವರು ಮನೆಯ ಹಂಚಿಕೆ ಪತ್ರ ವಿತರಿಸಿದರು.

ನಗರದ ಸ್ಟೇಷನ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕೆಳಗಡೆ ಜೋಪಡಿ ನಿರ್ಮಿಸಿಕೊಂಡು ಕಳೆದ 65 ವರ್ಷಗಳಿಂದ ವಾಸವಿದ್ದ ಖೈರುನ್ನಿಸಾ ಎಸ್. ಶೇಖಅತ್ತಾರ ಅವರು ಮನೆ ಪಡೆದ ಫ. ಲಾನುಭವಿ.
ರೈಲ್ವೆ ಮೇಲ್ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯವರು ಜೋಪಡಿಯನ್ನು ತೆರವುಗೊಳಿಸಿದ್ದರು. ಇದರಿಂದ ವಾಸಿಸಲು ಸೂರಿಲ್ಲದೆ ಖೈರುನ್ನಿಸಾ ಅವರು ತೊಂದರೆ ಅನುಭವಿಸುವಂತಾಗಿತ್ತು. ಈ ಹಿಂದೆ 2022ರ ‘ಮನೆ ಇಲ್ಲದವರಿಗೆ ಮನೆ’ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಮನೆ ಮಂಜೂರಾಗಿರಲಿಲ್ಲ.
ಇದೀಗ ಪ್ರಧಾನಮಂತ್ರಿ ಆವಾಸ್ ಯೋಜನೆಯ 3630 (ಜಿ+1) ಗುಂಪು ವಸತಿ ಯೋಜನೆಯಡಿ ಹಂಚಿಕೆಗೆ ಬಾಕಿ ಉಳಿದಿದ್ದ 760 ಮನೆಗಳ ಪೈಕಿ ಬ್ಲಾಕ್ ನಂ. 32ರ ಮೊದಲ ಮಹಡಿಯ ಮನೆ ನಂ. 01ನ್ನು ಖೈರುನ್ನಿಸಾ ಶೇಖ್ ಅವರಿಗೆ ಮಂಜೂರು ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ನಗರದ ನಗರಸಭೆ ಆವರಣದಲ್ಲಿ ಶಾಸಕ ಎಚ್.ಕೆ. ಪಾಟೀಲ ಅವರು ಫಲಾನುಭವಿಗೆ ಮನೆಯ ಹಂಚಿಕೆ ಪತ್ರ ವಿತರಿಸಿದರು. ದೀರ್ಘಕಾಲದಿಂದ ಸ್ವಂತ ಸೂರಿಗಾಗಿ ಕಾಯುತ್ತಿದ್ದ ಖೈರುನ್ನಿಸಾ ಕುಟುಂಬಕ್ಕೆ ದೀಪಾವಳಿ ಸಂದರ್ಭದಲ್ಲಿ ಮನೆ ದೊರೆತಂತಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಬರಕತ್‌ಅಲಿ ಮುಲ್ಲಾ, ಇಮ್ತಿಯಾಜ್ ಶಿರಹಟ್ಟಿ, ಖಮರಸುಲ್ತಾನ್ ನಮಾಜಿ, ಪರ್ವೀನಬಾನು ಮುಲ್ಲಾ, ಜಿಲ್ಲಾ ಕೆಡಿಪಿ ಸದಸ್ಯ ಎಸ್.ಎನ್. ಬಳ್ಳಾರಿ, ಸಯ್ಯದ್ ಖಾಲಿದ ಕೊಪ್ಪಳ, ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.








