ದೊಡ್ಡಬಳ್ಳಾಪುರ: ಪ್ರೀತಿ ಮಾಡಿ ಮದುವೆಯಾದರೆ ಸುಖವಾಗಿ ಸಂಸಾರ ನಡೆಸಬಹುದು ಎಂಬ ಕನಸಿನಲ್ಲಿದ್ದ ಯುವತಿಯ ಬದುಕು ದುರಂತದಲ್ಲಿ ಅಂತ್ಯಗೊಂಡಿದೆ.

ಮದುವೆಯಾಗಿ ಒಂದು ವರ್ಷ ಕಳೆಯುವ ಮುನ್ನವೇ 22 ವರ್ಷದ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಕಾವ್ಯ ಎಂದು ಗುರುತಿಸಲಾಗಿದೆ. ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾವ್ಯಗೆ ಹನುಮಂತರಾಜು ಎಂಬ ಯುವಕನ ಪರಿಚಯವಾಗಿತ್ತು. ಇಬ್ಬರ ನಡುವಿನ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಬಳಿಕ ಕಳೆದ ವರ್ಷ ಇಬ್ಬರೂ ವಿವಾಹವಾಗಿದ್ದರು.
ಆದರೆ ಮದುವೆಯಾದ ಬಳಿಕ ಕಾವ್ಯಗೆ ಗಂಡನ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿತ್ತು ಎಂಬ ಆರೋಪ ಕೇಳಿಬಂದಿದೆ. 5 ಲಕ್ಷ ರೂಪಾಯಿ ವರದಕ್ಷಿಣೆ ಹಣ ತರುವಂತೆ ಗಂಡನ ಮನೆಯವರು ಒತ್ತಡ ಹೇರುತ್ತಿದ್ದರು ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಪತಿ ಹನುಮಂತರಾಜು, ಅತ್ತೆ, ಮಾವ, ನಾದಿನಿಯರು ಹಾಗೂ ಅವರ ಪತಿಯರಿಂದಲೂ ಕಿರುಕುಳ ನೀಡಲಾಗುತ್ತಿತ್ತು ಎಂಬುದು ಕಾವ್ಯ ಮನೆಯವರ ಆರೋಪವಾಗಿದೆ.
ಪ್ರೀತಿಸಿ ಮದುವೆಯಾದ ಯುವತಿಯ ಬದುಕು ಹೀಗೆ ದುರಂತ ಅಂತ್ಯ ಕಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವರದಕ್ಷಿಣೆ ಕಿರುಕುಳದ ಆರೋಪದ ಕುರಿತು ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.










