ನವದೆಹಲಿ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸ್ವದೇಶ ವಾಪಸಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಡಿಸೆಂಬರ್ 16ರಂದು ಬಾಂಗ್ಲಾದೇಶಕ್ಕೆ ಮರಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದು, ಈ ಸಂಬಂಧ ತಮ್ಮ ಪ್ರಯಾಣಕ್ಕೆ ವಿಮಾನದ ವ್ಯವಸ್ಥೆ ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಸೀನಾ ಅವರ ವಕ್ತಾರ ಸೈಯದ್ ಮೊಜಮ್ಮೆಲ್ ಅಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಡಿಸೆಂಬರ್ 16ಕ್ಕೆ ವಿಶೇಷ ಮಹತ್ವವಿದೆ. 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ವಿಮೋಚನಾ ಯುದ್ಧದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಗಳಿಸಿದ ದಿನದ ಸ್ಮರಣಾರ್ಥ ಈ ದಿನವನ್ನು ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ದಿನವನ್ನು ಆಯ್ಕೆ ಮಾಡಿಕೊಂಡಿರುವುದು ರಾಜಕೀಯವಾಗಿ ಗಮನ ಸೆಳೆದಿದೆ.
ಬಾಂಗ್ಲಾ ಸರ್ಕಾರಕ್ಕೆ ವಿಮಾನದ ಬೇಡಿಕೆ:
2024ರ ಆಗಸ್ಟ್ನಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಮೀಸಲಾತಿ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಆಗಿನ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಆಗಮಿಸಿದ್ದರು. ಅಂದಿನಿಂದ ಅವರು ಭಾರತದಲ್ಲೇ ವಾಸಿಸುತ್ತಿದ್ದಾರೆ.
ಇದೀಗ ಭಾರತದಿಂದ ಢಾಕಾಗೆ ಪ್ರಯಾಣಿಸಲು ಬಾಂಗ್ಲಾದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಬಿಮನ್ ಬಾಂಗ್ಲಾದೇಶ ಏರ್ಲೈನ್ಸ್ ಮೂಲಕ ವಿಮಾನದ ವ್ಯವಸ್ಥೆ ಮಾಡಬೇಕೆಂದು ಹಸೀನಾ ಕೋರಿದ್ದಾರೆ. ತಮ್ಮನ್ನು ದೇಶದಿಂದ ಹೊರಹಾಕಿದ ಬಳಿಕ ಮರಳಲು ಅಗತ್ಯ ವ್ಯವಸ್ಥೆ ಮಾಡುವುದು ಬಾಂಗ್ಲಾದೇಶ ಸರ್ಕಾರದ ಜವಾಬ್ದಾರಿ ಎಂಬುದು ಅವರ ವಕ್ತಾರರ ವಾದವಾಗಿದೆ.
ಆದರೆ, ಹಸೀನಾ ಅವರ ವಾಪಸಾತಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಸರ್ಕಾರದಿಂದ ಯಾವುದೇ ಅನುಮತಿ ಅಥವಾ ವಿಮಾನ ವ್ಯವಸ್ಥೆ ದೃಢಪಟ್ಟಿಲ್ಲ.
ಮರಳಿದರೆ ಬಂಧನ ಖಚಿತ?
ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಿದರೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಅಲ್ಲಿನ ಸಚಿವರು ಎಚ್ಚರಿಕೆ ನೀಡಿದ್ದಾರೆ. ಹಸೀನಾ ವಿರುದ್ಧದ ಪ್ರಕರಣಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸರ್ಕಾರ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆಯೂ ಒತ್ತಾಯಿಸುತ್ತಿದೆ. ಹೀಗಾಗಿ ಅವರ ವಾಪಸಾತಿ ಸುಲಭವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
1,400 ಜನರ ಸಾವಿಗೆ ಕಾರಣವಾದ ಹಿಂಸಾಚಾರ:
2024ರಲ್ಲಿ ಸರ್ಕಾರಿ ಉದ್ಯೋಗಗಳ ಮೀಸಲಾತಿ ನೀತಿ ವಿರೋಧಿಸಿ ವಿದ್ಯಾರ್ಥಿಗಳು ಆರಂಭಿಸಿದ ಪ್ರತಿಭಟನೆ ಬಳಿಕ ದೊಡ್ಡ ಮಟ್ಟದ ಹೋರಾಟವಾಗಿ ರೂಪುಗೊಂಡಿತ್ತು. ಪ್ರತಿಭಟನೆಯನ್ನು ನಿಯಂತ್ರಿಸಲು ಭದ್ರತಾ ಪಡೆಗಳನ್ನು ಬಳಸಿದ ಹಸೀನಾ ಸರ್ಕಾರದ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಪ್ರತಿಭಟನೆ ಮತ್ತು ಹಿಂಸಾಚಾರದ ವೇಳೆ ಸುಮಾರು 1,400 ಜನರು ಸಾವನ್ನಪ್ಪಿದ್ದರು. ಈ ಘಟನೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ಮಾರಕ ಕ್ರಮ ಕೈಗೊಳ್ಳಲು ಆದೇಶಿಸಿದ ಆರೋಪದ ಮೇಲೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ 2025ರ ನವೆಂಬರ್ 17ರಂದು ಹಸೀನಾ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಮರಣದಂಡನೆ ವಿಧಿಸಿತ್ತು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ಅವಾಮಿ ಲೀಗ್ಗೂ ಸಂಕಷ್ಟ:
ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಚಟುವಟಿಕೆಗಳಿಗೆ ಬಾಂಗ್ಲಾದೇಶದಲ್ಲಿ ನಿಷೇಧ ಹೇರಲಾಗಿದೆ. ಪಕ್ಷದ ಹಲವು ನಾಯಕರು ದೇಶ ತೊರೆದಿದ್ದು, ಇನ್ನು ಕೆಲವರು ಬಂಧನದಲ್ಲಿದ್ದಾರೆ. ಮತ್ತೊಂದೆಡೆ, ಪಕ್ಷದ ಬೆಂಬಲಿಗರ ಪ್ರತಿಭಟನೆಗಳು ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿವೆ.
ಒಂದೆಡೆ ಮರಣದಂಡನೆ ಶಿಕ್ಷೆ, ಮತ್ತೊಂದೆಡೆ ಪಕ್ಷದ ಮೇಲಿನ ನಿಷೇಧ ಹಾಗೂ ಬಂಧನದ ಎಚ್ಚರಿಕೆ. ಇಂತಹ ಸವಾಲುಗಳ ನಡುವೆ ಶೇಖ್ ಹಸೀನಾ ಡಿಸೆಂಬರ್ 16ರಂದು ನಿಜವಾಗಿಯೂ ಬಾಂಗ್ಲಾದೇಶಕ್ಕೆ ಮರಳುತ್ತಾರೆಯೇ ಎಂಬುದು ಈಗ ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.










