ವಿಜಯಸಾಕ್ಷಿ ಸುದ್ದಿ, ಗದಗ
ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮೌಖಿಕವಾಗಿ ಬಂದ ದೂರಿನ ಕಾರಣವಿಟ್ಟುಕೊಂಡು ಯುವಕನೊಬ್ಬನಿಗೆ ಪೊಲೀಸರು ಪದೇ ಪದೇ ಕರೆ ಮಾಡಿದ್ದರಿಂದ ಹೆದರಿದ ಆತ, ಗದಗನ ಎಪಿಎಮ್ ಸಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ನಿನ್ನೆ ಸಂಜೆ ನಡೆದಿದೆ ಎನ್ನಲಾಗಿದೆ.
ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದ ಟಿಪ್ಪುಸುಲ್ತಾನ್ ಹೊಸೂರು ಎಂಬಾತನೇ ವಿಷ ಸೇವಿಸಿ ಜಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯ ನರಳಾಡುತ್ತಿರುವ ಯುವಕ.
ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆದುಕೊಂಡ ಟಿಪ್ಪುಸುಲ್ತಾನ್, ತಾಯಿ ಆರೈಕೆಯಲ್ಲಿ ಬೆಳೆದಾತ. ತಂದೆಗೆ ಬರಬೇಕಾದ ಆಸ್ತಿ ಇನ್ನೂ ಇವರಿಗೆ ಬಂದಿಲ್ಲ. ದೊಡ್ಡಪ್ಪ ಆಸ್ತಿ ಕೊಡದೇ ಸತಾಯಿಸುತ್ತಿದ್ದಾನೆ ಎಂಬುದು ಟಿಪ್ಪುಸುಲ್ತಾನ ಹಾಗೂ ತಾಯಿಯ ದೂರು. ಕಳೆದ ಹಲವು ದಿನಗಳಿಂದ ಆಸ್ತಿ ಕೇಳಿದರೂ ಯಾವ ಆಸ್ತಿಯೂ ನಿಮಗೆ ಬರಬೇಕಿಲ್ಲ ಅಂತ ಟಿಪ್ಪುಸುಲ್ತಾನನ ದೊಡ್ಡಪ್ಪ ವಾದ ಮಾಡುತ್ತಿದ್ದಾನೆ ಎನ್ನಲಾಗಿದೆ.
ಸಾಲ-ಸೋಲ ಮಾಡಿ ಹೊಟ್ಟೆಪಾಡಿಗೆ ಗೂಡ್ಸ್ ವಾಹನ ಖರೀದಿ ಮಾಡಿರುವ ಟಿಪ್ಪುಸುಲ್ತಾನ್, ಅದರ ದುಡಿಮೆಯಿಂದಲೇ ತನ್ನ ತಾಯಿ, ಪತ್ನಿ ಹಾಗೂ ಎರಡು ಮಕ್ಕಳ ಸಂಸಾರ ಸಾಗಿಸುತ್ತಿದ್ದಾನೆ. ಆದರೆ ಸರಿಯಾದ ದುಡಿಮೆ ಇಲ್ಲದೆ, ಗೂಡ್ಸ್ ವಾಹನದ ಕಂತು ತುಂಬಲಾರದೇ ಒದ್ದಾಡುತ್ತಿದ್ದಾನೆ. ತಂದೆ ಆಸ್ತಿ ಸಿಕ್ಕರೆ ಮತ್ತಷ್ಟು ಅನುಕೂಲವಾಗುತ್ತೆ ಅನ್ನೋದು ಟಿಪ್ಪುಸುಲ್ತಾನನ ವಿಚಾರ.
ಮೊನ್ನೆ ಮೊಹರಂ ಹಬ್ಬದಲ್ಲಿ ಟಿಪ್ಪುಸುಲ್ತಾನ್ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ಮೌಖಿಕವಾಗಿ ಅವರ ದೊಡ್ಡಪ್ಪ ಸಿಕಂದರ್ ಸಾಬ್ ರೋಣ ಪೊಲೀಸರಿಗೆ ಹೇಳಿದ್ದಾನೆ. ಆಗ ರೋಣ ಪೊಲೀಸರು, ಟಿಪ್ಪುಸುಲ್ತಾನನಿಗೆ ಫೋನ್ ಮಾಡಿ ಸ್ಟೇಶನ್ ಗೆ ಬಂದು ಭೇಟಿ ಆಗಿ ಹೋಗು ಎಂದಿದ್ದಾರೆ. ನಿಮ್ಮ ದೊಡ್ಡಪ್ಪ ದೂರು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದರಿಂದ ಹೆದರಿದ ಟಿಪ್ಪುಸುಲ್ತಾನ್, ಠಾಣೆಯತ್ತ ಸುಳಿದಿಲ್ಲ. ಮತ್ತೆ ಮತ್ತೆ ಫೋನ್ ಮಾಡಿದ ರೋಣ ಪೊಲೀಸರು, ನೀ ಬರದೇ ಹೋದರೆ ಬೇರೆ ಆಗುತ್ತ ನೋಡ ಅಂತ ಹೇಳಿದ್ದಾರೆ. ಆಗ ಟಿಪ್ಪುಸುಲ್ತಾನ್ ಬೆದರಿದ್ದಾನೆ. ಮಂಗಳವಾರ ಹೆಸರು ಮಾರಾಟ ಮಾಡಲು ಟ್ರ್ಯಾಕ್ಟರ ತಂದಿದ್ದ ಟಿಪ್ಪುಸುಲ್ತಾನ್, ಬೆಳೆಗೆ ಸಿಂಪಡಣೆ ಮಾಡುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿ ಒದ್ದಾಡುತ್ತಿದ್ದಾಗ ನೋಡಿದ ಜನ ತಕ್ಷಣವೇ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸದ್ಯ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಟಿಪ್ಪುಸುಲ್ತಾನ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಟಿಪ್ಪುಸುಲ್ತಾನನ ಸ್ಥಿತಿ ನೋಡಿ ತಾಯಿ, ಪತ್ನಿ ಕಣ್ಣೀರು ಹಾಕುತ್ತಿದ್ದಾರೆ. ಈ ಕುರಿತು ಇದುವರೆಗೂ ಯಾವುದೇ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ದೊರೆತಿಲ್ಲ.