Homecultureಹಬ್ಬದ ಆಚರಣೆ ದಾರಿ ತಪ್ಪದಿರಲಿ

ಹಬ್ಬದ ಆಚರಣೆ ದಾರಿ ತಪ್ಪದಿರಲಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮನಸ್ಸಿನ ಅರಿಷಡ್ವರ್ಗಗಳ ಕಳೆದು, ಪರಸ್ಪರ ಪ್ರೀತಿ-ಸ್ನೇಹ, ಬಾಂಧವ್ಯ-ಸೌಹಾರ್ಧತೆ ಬೆಸೆಯುವ ರಂಗಿನೋಕುಳಿ ಹಬ್ಬ ಶುಕ್ರವಾರ ಲಕ್ಷ್ಮೇಶ್ವರದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಬೆಳ್ಳಂ ಬೆಳಿಗ್ಗೆಯೇ ಪುಟ್ಟ ಮಕ್ಕಳು ಹೆಣ್ಣು-ಗಂಡು ಬೇಧ-ಬಾವವಿಲ್ಲದೇ ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಹಚ್ಚುವ ಮೂಲಕ ಎಲ್ಲೆಲ್ಲೂ ರಂಗಿನಾಟಕ್ಕೆ ರಂಗು ಮೂಡಿಸಿದರು.

ಪಟ್ಟಣದ ಹಳ್ಳದ ಕೇರಿ ಓಣಿಯ ಯುವಕ ಸಂಘದವರು ಟ್ರ್ಯಾಕ್ಟರಿನಲ್ಲಿ ರಾಮಮಂದಿರ ಆಕೃತಿಯಲ್ಲಿ ರತಿ-ಕಾಮಣ್ಣನ ಮೂರ್ತಿಯನ್ನಿರಿಸಿ ಡಿಜೆ ಅಬ್ಬರದ ಕುಣಿತದೊಂದಿಗೆ ಮೆರವಣಿಗೆ ಮಾಡಿದರು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿ, ಹೋಳಿ ಹಬ್ಬ ಭಾರತದ ಸಂಸ್ಕೃತಿಯ ಪ್ರತೀಕ. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ವಿವಿಧ ಜಾತಿ, ಧರ್ಮ, ಬಡವ-ಬಲ್ಲಿದ, ಮೇಲು-ಕೀಳು, ಹಿರಿ-ಕಿರಿಯರನ್ನು ಸೇರಿಸಿ ಪರಸ್ಪರರಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯ, ಸೌಹಾರ್ದತೆ ಬೆಸೆಯುವ ಶಕ್ತಿ ಹೋಳಿ ಹಬ್ಬಕ್ಕಿದೆ. ಈ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ.

holi

ಪ್ರಸ್ತುತ ಡಿಜೆ ಅಬ್ಬರ, ಸಂಸ್ಕಾರ ರಹಿತ ವರ್ತನೆ, ಸರಾಯಿ ಕುಡಿತದಿಂದ ಹಬ್ಬದ ಆಚರಣೆ ದಾರಿ ತಪ್ಪದಿರಲಿ ಎಂದು ಮನವಿ ಮಾಡಿದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಯಲ್ಲಪ್ಪಗೌಡ ಉದ್ದನಗೌಡ್ರ, ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ಶಿವು ಕಟಗಿ, ನವೀನ ಬೆಳ್ಳಟ್ಟಿ, ಅನಿಲ ಮುಳಗುಂದ, ಶಕ್ತಿ ಕತ್ತಿ, ಬಸವರಾಜ ಚಕ್ರಸಾಲಿ, ಮಂಜುನಾಥ ಗೊರವರ, ಪಾಣಿಗಟ್ಟಿ, ವಿಜಯ ಬೂದಿಹಾಳ ಸೇರಿ ಹಲವರಿದ್ದರು.

ಡಿಜೆ ಅಬ್ಬರ-ರೇನ್ ಡ್ಯಾನ್ಸ್ ಸಂಭ್ರಮ: ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ಹಿಂದೂ ಸೇವಾ ಪ್ರತಿಷ್ಠಾನದ ಯುವಕರು ಮತ್ತು ಸತಾನತ ಹಿಂದೂ ಯುವಕ ಮಂಡಳದಿಂದ ಸೊಪ್ಪಿನಕೇರಿ ಓಣಿಯ ಯುವಕರು ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಿದ್ದರು. ಬಣ್ಣದ ಬಟ್ಟೆಯ ಪೆಂಡಾಲ್‌ನಲ್ಲಿ ಕೃತಕ ಮಳೆ ಸಿಂಚನ ಸೃಷ್ಟಿಸಿ ರಂಗಿನೋಕುಳಿ ಆಡಿದರು. ಬಿಸಿಲಿನ ಬೇಗೆಗೆ ರೇನ್ ಡ್ಯಾನ್ಸ್ ದೇಹ-ಮನಸ್ಸಿಗೆ ಮುದ ನೀಡಿತು.

rain dance

ಮಕ್ಕಳಾಟವೇ ಜೋರು: ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳು ಗೆಳತಿಯರ ಮನೆ, ಓಣಿಗೆ ಹೋಗಿ ಬಣ್ಣ ಹಚ್ಚಿ ಸೆಲ್ಪಿಯೊಂದಿಗೆ ಖುಷಿಪಟ್ಟರು. ಸಣ್ಣ ಹುಡುಗರು ಅಣುಕು ಶವಯಾತ್ರೆ, ಹಲಗೆ ಬಾರಿಸುತ್ತಾ ಕುಣಿದು ಕುಪ್ಪಳಿಸಿದರು. ಪಟ್ಟಣದ ಬಸ್ತಿಬಣ, ಪೇಠಬಣ, ವಿನಾಯಕ ನಗರ, ರಂಭಾಪುರಿ ನಗರ, ಸರಾಫ ಬಜಾರ, ಅಂಬೇಡ್ಕರ ನಗರ, ಇಂದಿರಾನಗರ, ಡೋರ್ ಗಲ್ಲಿ, ಹುಲಗೇರಿಬಣ ಸೇರಿ ಹಲವೆಡೆ ಪ್ರತಿಷ್ಠಾಪಿಸಿದ್ದ ರತಿ ಮನ್ಮಥರ ಮತ್ತು ಹುಲ್ಲುಗಾಮನ ಆಕೃತಿ ಮುಂದೆ ಬಣ್ಣ ಎರಚಿ ಹಲಗೆಯ ನಾದಕ್ಕೆ ಕುಣಿದು ಕೇಕೆ ಹಾಕಿ ಸಂಭ್ರಮಿಸಿದರು.

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಆವರಣದಲ್ಲಿ ನಿತ್ಯ ಯೋಗಾಭ್ಯಾಸ ಮಾಡುತ್ತಿರುವ ಯೋಗ ಸಮಿತಿ ಸದಸ್ಯರು ಶುಕ್ರವಾರ ಯೋಗವನ್ನು ಮುಗಿಸಿದ ನಂತರ ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಮಧ್ಯಾಹ್ನದ ನಂತರ ಓಣಿಯಲ್ಲಿ ಪ್ರತಿಷ್ಠಾಪಿಸಿದ್ದ ರತಿಕಾಮನ ಮೂರ್ತಿ ದಹನ ಮಾಡಿ ರಂಗಿನಾಟಕ್ಕೆ ತೆರೆ ಎಳೆದರು. ಹಬ್ಬದ ಸಂಭ್ರಮ ಒಂದೆಡೆಯಾಗಿದ್ದರೆ ಕುಡಿದ ಅಮಲಿನಲ್ಲಿದ್ದ ಕೆಲ ಯುವಕರು ತಮಗರಿವಿಲ್ಲದಂತೆ ವರ್ತಿಸುತ್ತಿದ್ದ ದೃಶ್ಯ ಪ್ರಜ್ಞಾವಂತ ಸಮಾಜಕ್ಕೆ ಪ್ರಶ್ನೆಯಾಗಿ ಕಾಡಿತು. ಮುನ್ನಚ್ಚರಿಕೆ ಕ್ರಮವಾಗಿ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ಪಿಎಸ್‌ಐ ಈರಣ್ಣ ರಿತ್ತಿ ಸೂಕ್ತ ಬಂದೋಬಸ್ತ್ ನಿರ್ವಹಿಸಿದರು.

ವರ್ಷದಿಂದ ವರ್ಷಕ್ಕೆ ಬಣ್ಣದಾಟದ ಸಂಪ್ರದಾಯದಿಂದ ದೂರ ಸರಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ರಂಗಪಂಚಮಿಗೆ ಮೊದಲೇ ಅನೇಕರು ಗೋವಾ, ಮುರುಡೇಶ್ವರ, ಗೋಕರ್ಣ ಸೇರಿ ಸಮುದ್ರ ಪ್ರಯಾಣಕ್ಕೆ ಮೊದಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ತಮ್ಮದೇ ಆದ ಯೋಜನೆ ರೂಪಿಸಿಕೊಂಡು ಹಬ್ಬದಿಂದ ಹೊರಗುಳಿಯುತ್ತಿದ್ದಾರೆ. ಇದಕ್ಕೆ ಕಾರಣ ಹಬ್ಬದ ಆಚರಣೆಗಳು ದಾರಿ ತಪ್ಪುತ್ತಿರುವುದಷ್ಟೇ ಅಲ್ಲದೆ, ಈ ವರ್ಷ ನೀರಿನ ಸಮಸ್ಯೆಯೂ ಕಾರಣವಾಗಿದೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img