ವಿಜಯಸಾಕ್ಷಿ ಸುದ್ದಿ, ಹುಲಕೋಟಿ : ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವಪ್ರೇರಣೆಯಿಂದ ಭಾಗವಹಿಸಿ ಯಶಸ್ಸನ್ನು ಹೊಂದಬೇಕೆಂದು ಬಾಗಲಕೋಟೆಯ ಹೇಮ-ವೇಮ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಮೋಹನ ದೇಶಪಾಂಡೆ ಹೇಳಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಚ್. ಪಾಟೀಲ ಸೆಂಟರ್ ಫಾರ್ ಹ್ಯೂಮನ್ ಎಕ್ಸಲನ್ಸ್ ಸ್ವಾಮಿ ವಿವೇಕಾನಂದ ಕಾಲೇಜಿನ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ ಮಾತನಾಡಿ, ಸಹಪಠ್ಯ ಚಟುವಟಿಕೆಗಳು ನಮ್ಮ ಒತ್ತಡವನ್ನು ನಿವಾರಣೆ ಮಾಡಲು ಸಹಕಾರಿ. ಅಲ್ಲದೇ ಅಂಕ ಗಳಿಕೆಯಷ್ಟೇ ವಿದ್ಯಾರ್ಥಿಗಳ ಮಾನದಂಡವಲ್ಲ. ನಮ್ಮ ಪರಿಸರ, ಸಂಬಂಧಿಕರ ಕುರಿತು ಆಲೋಚನೆಗಳನ್ನು ಮಾಡಿ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆಂದರು.
ಅನುಷಾ ಹೊನ್ನನಾಯ್ಕರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ರೀರಕ್ಷಾ ಕುಲಕರ್ಣಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕುಮಾರ ಲಕ್ಷ್ಮಿನಾರಾಯಣ ಸ್ವಾಗತಿಸಿದನು. ರೋಜಾ ಕಾತರಕಿ ಆತಿಥಿಗಳನ್ನು ಪರಿಚಯಿಸಿದರು.
ಕಾಲೇಜಿನ ಕ್ರೀಡಾ ಚಟುವಟಿಕೆಗಳ ಮುಖ್ಯಸ್ಥರಾದ ಉಪನ್ಯಾಸಕಿ ಸಂಧ್ಯಾ ಗಂಗಾವತಿ ಎಲ್ಲಾ ಕ್ಯಾಪ್ಟನ್‌ಗಳಿಗೆ ಕ್ರೀಡಾ ಚಟುವಟಿಕೆಗಳ ಪ್ರತಿಜ್ಞಾವಿಧಿ ಬೋಧಿಸಿದರು. ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥರಾದ ಉಪನ್ಯಾಸಕಿ ಜಯಶ್ರೀ ಹೊಳೆಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ಎಚ್. ಪಾಟೀಲ ಸೆಂಟರ್ ಫಾರ್ ಹ್ಯೂಮನ್ ಎಕ್ಸಲನ್ಸ್ ಸಂಸ್ಥೆಯ ನಿರ್ದೇಶಕ ಆರ್.ಆರ್. ಸಾವಕಾರ್, ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಿ.ಎಚ್. ಕಟಗೇರಿ ಸೇರಿದಂತೆ ಉಪನ್ಯಾಸಕರು ಹಾಜರಿದ್ದರು.
ಶ್ರೀತನು ಅಂಗಡಿ, ಮಿಥುನ ಜಿನಗಿ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ಪೂಜಾರ ವಂದಿಸಿದರು.