ನೆಲಮಂಗಲ: ರೈತರೊಬ್ಬರ ಭೂಮಿ ಸರ್ವೆ ಮಾಡಲು ₹20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಲೈಸನ್ಸ್ ಸರ್ವೆಯರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೆಲಮಂಗಲ ತಾಲೂಕು ಕಚೇರಿಯಲ್ಲಿ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಮಹೇಶ್ ಗೌಡ ಎಂಬ ಸರ್ವೆಯರ್ ರೈತನಿಂದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ರೈತರೊಬ್ಬರ ಜಮೀನಿನ ಸರ್ವೆ ಕಾರ್ಯಕ್ಕಾಗಿ ಮಹೇಶ್ ಗೌಡ ₹20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅದರಂತೆ ರೈತನಿಂದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮೂರು ಕಾರುಗಳಲ್ಲಿ ಆಗಮಿಸಿದ ಹತ್ತುಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಯ ಸರ್ವೆ ವಿಭಾಗದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ವೇಳೆ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆಯೂ ನಡೆಯುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳ ಮುಂದಿನ ತನಿಖೆ ಹಾಗೂ ಅಧಿಕೃತ ಮಾಹಿತಿಯ ನಿರೀಕ್ಷೆಯಿದೆ.









