ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಜವರಪ್ಪ ಎಂಬ ವ್ಯಕ್ತಿ ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ಹಾಗೂ ಕುರ್ಣೇಗಾಲ ಗ್ರಾಮದ ಅಮೃತಾ (26)ರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಈ ಕೊಲೆ ನಡೆದಿರುವುದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಕುರ್ಣೇಗಾಲ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ಜವರಪ್ಪ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜವರಪ್ಪನ ಸಹೋದರ ರವಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಅಮೃತಾ ಮತ್ತು ಸಿದ್ದೇಶ್ ನಡುವೆ ಅಕ್ರಮ ಸಂಬಂಧ ಇರುವುದಾಗಿ ತಿಳಿದುಬಂದಿದ್ದು, ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಜವರಪ್ಪನನ್ನು ಕೊಲ್ಲಲು ಸಂಚು ರೂಪಿಸಿರುವುದು ಬಹಿರಂಗವಾಗಿದೆ.
ಯೋಜನೆಯಂತೆ ಅಮೃತಾ ಕುಮ್ಮಕ್ಕಿನಿಂದ ಸಿದ್ದೇಶ್ ಜವರಪ್ಪನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಜವರಪ್ಪ ಮತ್ತು ಅಮೃತಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಸಣ್ಣಪುಟ್ಟ ವಿಷಯಗಳಿಗೆ ಆಗಾಗ ಗಲಾಟೆ ನಡೆಯುತ್ತಿತ್ತೆಂದು ಹೇಳಲಾಗಿದೆ. ಸುಮಾರು 12 ದಿನಗಳ ಹಿಂದೆ ಅಮೃತಾ ಮಕ್ಕಳೊಂದಿಗೆ ತವರೂರಿಗೆ ತೆರಳಿದ್ದಳು.
ಏಪ್ರಿಲ್ 16ರಂದು ಹೆಂಡತಿಯ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದ ಜವರಪ್ಪ ಮನೆಗೆ ಮರಳಿರಲಿಲ್ಲ. ಬಳಿಕ ಮರುದಿನ ಬೆಳಗ್ಗೆ ಗ್ರಾಮ ಸಮೀಪ ರಸ್ತೆ ಬದಿಯಲ್ಲಿ ಅವನ ಮೃತದೇಹ ಪತ್ತೆಯಾಗಿತ್ತು.
ಈ ಪ್ರಕರಣದ ತನಿಖೆಗಾಗಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಕೊನೆಗೆ ಪ್ರಕರಣದ ನಿಜಸ್ವರೂಪ ಬಹಿರಂಗವಾಗಿದ್ದು, ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ. ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.



