HomeKarnataka Newsರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ವೇಳೆ ಆಕಸ್ಮಿಕವಾಗಿ ಖಾಸಗಿ ಅಂಗ ಕಾಣಿಸಿದರೆ ಲೈಂಗಿಕ ಕಿರುಕುಳವಲ್ಲ: ಹೈಕೋರ್ಟ್

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ವೇಳೆ ಆಕಸ್ಮಿಕವಾಗಿ ಖಾಸಗಿ ಅಂಗ ಕಾಣಿಸಿದರೆ ಲೈಂಗಿಕ ಕಿರುಕುಳವಲ್ಲ: ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಸಾರ್ವಜನಿಕ ಶೌಚಾಲಯದ ಸೌಲಭ್ಯ ಇಲ್ಲದ ಕಾರಣ ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವ್ಯಕ್ತಿಯ ಖಾಸಗಿ ಅಂಗ ಮಹಿಳೆಗೆ ಕಾಣಿಸಿದರೆ, ಅದನ್ನು ಲೈಂಗಿಕ ಕಿರುಕುಳವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಮತ್ತು ಆರೋಪಪಟ್ಟಿ ರದ್ದುಗೊಳಿಸುವಂತೆ ಕೋರಿ ಚಿಕ್ಕಮಗಳೂರು ಮೂಲದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಲೈಂಗಿಕ ಕಿರುಕುಳದ ಅಪರಾಧ ಸಾಬೀತಾಗಲು ಆರೋಪಿಯಲ್ಲಿ ಲೈಂಗಿಕ ದುರುದ್ದೇಶ ಇರುವುದು ಅಗತ್ಯ. ಮಹಿಳೆಯನ್ನು ಉದ್ದೇಶಪೂರ್ವಕವಾಗಿ ನೋಡಿ ಖಾಸಗಿ ಅಂಗ ಪ್ರದರ್ಶಿಸದ ಹೊರತು, ಸಂದರ್ಭದ ಕಾರಣದಿಂದ ಆಕಸ್ಮಿಕವಾಗಿ ನಡೆದ ಘಟನೆಯನ್ನು ಲೈಂಗಿಕ ಕಿರುಕುಳದ ಅಪರಾಧವೆಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದಲ್ಲಿ ದೂರುದಾರ ಮಹಿಳೆಯನ್ನು ಚುಡಾಯಿಸಿದ, ಬೆನ್ನಟ್ಟಿದ ಅಥವಾ ಯಾವುದೇ ರೀತಿಯ ಲೈಂಗಿಕ ಸನ್ನೆ ಮಾಡಿದ ಆರೋಪಗಳಿಲ್ಲ. ಬದಲಾಗಿ ಮಹಿಳೆಯನ್ನು ಕಂಡಾಗ ಯುವಕನೇ ಆಘಾತಕ್ಕೊಳಗಾಗಿದ್ದಾನೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ. ಯಾವುದೇ ಲೈಂಗಿಕ ಉದ್ದೇಶವಿಲ್ಲದ ಇಂತಹ ಮುಜುಗರದ ಸಾಮಾಜಿಕ ಸನ್ನಿವೇಶಗಳನ್ನು ಕ್ರಿಮಿನಲ್ ಪ್ರಕರಣದ ವ್ಯಾಪ್ತಿಗೆ ತರುವುದು ಸೂಕ್ತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇಂತಹ ಪ್ರಕರಣದಲ್ಲಿ ಯುವಕನನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವುದೇ ಆತನಿಗೆ ಶಿಕ್ಷೆಯಾಗಿ ಪರಿಣಮಿಸಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿದಾರನ ವಿರುದ್ಧ ದಾಖಲಾಗಿದ್ದ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ಆರೋಪಪಟ್ಟಿಯನ್ನು ರದ್ದುಗೊಳಿಸಿದೆ.

ಪ್ರಕರಣದ ಹಿನ್ನೆಲೆ ಏನು?

2026ರ ಜನವರಿ 24ರ ಮಧ್ಯಾಹ್ನ ಬೆಂಗಳೂರಿನ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಯುವತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಬಸ್‌ನಿಂದ ಇಳಿದಿದ್ದ ಅರ್ಜಿದಾರ ಯುವಕ ತುರ್ತಾಗಿ ಮೂತ್ರ ವಿಸರ್ಜನೆ ಮಾಡಲು ಸ್ಥಳ ಹುಡುಕಿದ್ದ ಎನ್ನಲಾಗಿದೆ. ಸಮೀಪದಲ್ಲಿ ಸಾರ್ವಜನಿಕ ಶೌಚಾಲಯ ಕಾಣದ ಕಾರಣ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಎಂದು ಅರ್ಜಿದಾರರ ಪರ ವಾದಿಸಲಾಗಿತ್ತು.

ಈ ಸಂದರ್ಭದಲ್ಲಿ ದೂರುದಾರ ಯುವತಿ ಅಲ್ಲಿಗೆ ಬಂದಿದ್ದು, ಯುವಕ ದಿಢೀರನೆ ತಿರುಗಿದಾಗ ಆಕಸ್ಮಿಕವಾಗಿ ಆತನ ಖಾಸಗಿ ಅಂಗ ಯುವತಿಗೆ ಕಾಣಿಸಿತ್ತು ಎನ್ನಲಾಗಿದೆ. ಯುವತಿ ಕೂಗಿಕೊಂಡಾಗ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಘಟನೆಯನ್ನು ಲೈಂಗಿಕ ಕಿರುಕುಳವೆಂದು ಪರಿಗಣಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75(2) ಅಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಘಟನೆ ಸಂಪೂರ್ಣ ಆಕಸ್ಮಿಕವಾಗಿದ್ದು, ದೂರುದಾರ ಮಹಿಳೆಗೆ ಲೈಂಗಿಕ ಕಿರುಕುಳ ನೀಡುವ ಯಾವುದೇ ಉದ್ದೇಶ ಯುವಕನಿಗೆ ಇರಲಿಲ್ಲ ಎಂದು ವಾದಿಸಿದ್ದರು. ಆಕಸ್ಮಿಕವಾಗಿ ಖಾಸಗಿ ಅಂಗ ಕಾಣಿಸಿಕೊಂಡಿದ್ದನ್ನು ಅಪರಾಧ ಕೃತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣ ಮತ್ತು ಆರೋಪಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಸರ್ಕಾರ ಹಾಗೂ ದೂರುದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಲೈಂಗಿಕ ದುರುದ್ದೇಶದ ಅಂಶ ಇಲ್ಲದಿರುವುದನ್ನು ಪರಿಗಣಿಸಿ ಯುವಕನ ವಿರುದ್ಧದ ಪ್ರಕರಣ ಹಾಗೂ ಆರೋಪಪಟ್ಟಿಯನ್ನು ರದ್ದುಗೊಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img