ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿರುವ ರೈತರ ಸಭೆಯನ್ನು ಅಯೋಜನೆ ಮಾಡಿದ್ದ ಕೃಷಿ ಇಲಾಖೆಯ ಅಧಿಕಾರಿಗಳೇ ಸಭೆಗೆ ಗೈರಾಗಿದ್ದರಿಂದ ರೈತರು ಆಕ್ರೋಶ ಹೊರಹಾಕಿದ ಘಟನೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಸರಕಾರ ಹೊಸದಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿತ್ತು. ಆಯ್ಕೆಯಾದ ಪಲಾನುಭವಿಗಳು ಇಲಾಖೆಯ ನಿರ್ದೇಶನಂದತೆ ಕೃಷಿಹೊಂಡಗಳನ್ನು ನಿರ್ಮಿಸಿಕೊಂಡಿದ್ದರೂ ಸಹ ಸಹಾಯಧನ ಬಿಡುಗಡೆಯಾಗಿಲ್ಲ ಎಂದು ರೈತರು ಆರೋಪಿಸಿದ್ದರಿಂದ ಹಿರಿಯ ಅಧಿಕಾರಿ ರವೀಂದ್ರ ಪಾಟೀಲ ಸಭೆಯನ್ನು ಆಯೋಜನೆ ಮಾಡಿದ್ದರು.
ಮಂಗಳವಾರ ಬೆಳಿಗ್ಗೆ 10.30ಕ್ಕೆ ತಮ್ಮ ಕಚೇರಿಯಲ್ಲಿನ ಸಭಾಭವನದಲ್ಲಿ ಫಲಾನುಭವಿಗಳ ಸಭೆಯನ್ನು ಆಯೋಜಿಸಿದ್ದ ರವೀಂದ್ರ ಪಾಟೀಲರು ಮದ್ಯಾಹ್ನ 1 ಗಂಟೆ ಕಳೆದರೂ ಸಹ ಕಚೇರಿಯತ್ತ ಬರಲಿಲ್ಲ. ರೈತರು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದರೂ ಸಬ್ಸಡಿ ಹಣ ಪಾವತಿಸುತ್ತಿಲ್ಲ. ಈ ವಿಷಯವಾಗಿ ಅಧಿಕಾರಿಗಳೇ ಫಲಾನುಭವಿಗಳ ಸಭೆಯನ್ನು ಕರೆದು ಅವರೇ ಬಂದಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.
ಮಹಿಳಾ ಸಿಬ್ಬಂದಿ ಆಕ್ರೋಶಗೊಂಡ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಹ ರೈತರು ಅಧಿಕಾರಿಗಳೇ ಇಲ್ಲದೆ ನೀವೇನು ಮಾಡುತ್ತಿರಿ ಎಂದು ಸಭೆಯಿಂದ ನಿರ್ಗಮಿಸಿದರು. ರೈತರಾದ ಬಸವರಾಜ ಅಂಗಡಿ, ಸುಭಾಸ ಮಂಗಳೂರ, ಸಂಗಪ್ಪ ಕಂಬಳಿ, ಎಸ್.ಎಂ. ಮುಲ್ಲಾ ಇದ್ದರು.