ನವದೆಹಲಿ: ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ.
ಮೇ 1ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 993 ರೂಪಾಯಿ ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಹೊಸ ದರ 3,071.50 ರೂ.ಗೆ ತಲುಪಿದೆ.
ಇದಕ್ಕೂ ಮೊದಲು ದೆಹಲಿಯಲ್ಲಿ ಇದೇ ಸಿಲಿಂಡರ್ ದರ 2,078.50 ರೂ. ಇತ್ತು. ಆದರೆ ಇತ್ತೀಚಿನ ಪರಿಷ್ಕರಣೆಯ ನಂತರ ವಾಣಿಜ್ಯ ಬಳಕೆದಾರರಿಗೆ ಭಾರೀ ಹೊರೆ ಎದುರಾಗಿದೆ.
ಆದರೆ ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.
ಜಾಗತಿಕ ಇಂಧನ ಬೆಲೆಗಳ ಏರಿಕೆ ಹಾಗೂ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ನೇರ ಆರ್ಥಿಕ ಒತ್ತಡ ಹೆಚ್ಚಲಿದ್ದು, ಆಹಾರ ಪದಾರ್ಥಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.



