ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದೆ.

ಹಬ್ಬದ ಎರಡನೇ ದಿನವಾದ ಸೋಮವಾರ ಮುಂಜಾನೆ ದೆಹಲಿಯಾದ್ಯಂತ ದಟ್ಟ ಹೊಗೆ ಮತ್ತು ಮಂಜು ಆವರಿಸಿದ್ದು, ನಗರದ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿದೆ.
ದಟ್ಟ ಹೊಗೆ ಮತ್ತು ಮಂಜಿನಿಂದಾಗಿ ಮುಂಜಾನೆ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಹಲವು ರಸ್ತೆಗಳಲ್ಲಿ ಗೋಚರತೆ ಕಡಿಮೆಯಾಗಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಆ್ಯಪ್ ಮಾಹಿತಿ ಪ್ರಕಾರ, ನವೆಂಬರ್ 8ರ ರಾತ್ರಿ 11:05ರ ವೇಳೆಗೆ ದೆಹಲಿಯ ಒಟ್ಟಾರೆ ಎಕ್ಯೂಐ 373ರಷ್ಟಿತ್ತು. ಆದರೆ ಸೋಮವಾರ ಬೆಳಗ್ಗೆಯಾಗುತ್ತಿದ್ದಂತೆ ಹಲವು ಪ್ರದೇಶಗಳಲ್ಲಿ ವಾಯುಮಾಲಿನ್ಯ ಪ್ರಮಾಣ 400ರ ಗಡಿ ದಾಟಿದೆ.
ದೆಹಲಿಯ ಆಲಿಪುರ, ಬವಾನಾ, ಬುರ್ವಾರಿ, ಚಾಂದಿನಿ ಚೌಕ್, ಮುಂಡ್ಕಾ, ಪಂಜಾಬಿ ಬಾಗ್, ರೋಹಿಣಿ ಮತ್ತು ವಿವೇಕ್ ವಿಹಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ತಲುಪಿದೆ. ಸೋಮವಾರ ಮುಂಜಾನೆ 4:20ರ ವೇಳೆಗೆ ಈ ಪ್ರದೇಶಗಳಲ್ಲಿ ಎಕ್ಯೂಐ 400ಕ್ಕೂ ಅಧಿಕ ದಾಖಲಾಗಿದೆ.
ಇನ್ನು ದೆಹಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಎನ್ಸಿಆರ್ ನಗರಗಳಲ್ಲಿಯೂ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ನೋಯ್ಡಾದಲ್ಲಿ 319, ಗಾಜಿಯಾಬಾದ್ನಲ್ಲಿ 360, ಗುರುಗ್ರಾಮ್ನಲ್ಲಿ 280 ಹಾಗೂ ಫರಿದಾಬಾದ್ನಲ್ಲಿ 297 ಎಕ್ಯೂಐ ದಾಖಲಾಗಿದೆ.
ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ವಾಯುಮಾಲಿನ್ಯ ಹೆಚ್ಚಳವಾಗಿರುವುದು ದೆಹಲಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.










