ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ೩೫ ವಾರ್ಡ್ಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ರಾಘವೇಂದ್ರ ಯಳವತ್ತಿ ಆರೋಪಿಸಿದ್ದಾರೆ.
೨೦೨೫-೨೬ನೇ ಸಾಲಿನ ಯೋಜನೆಯಡಿ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ನೀಡಿ, ಬಿಜೆಪಿ ಸದಸ್ಯರ ವಾರ್ಡ್ಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ಬಿಜೆಪಿ ಸದಸ್ಯರು ಹಾಗೂ ಆಯಾ ವಾರ್ಡ್ಗಳ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರುವ ಬೆಟಗೇರಿ ಭಾಗದ ೭ನೇ ವಾರ್ಡ್ನಲ್ಲಿ ೧೬ಕ್ಕೂ ಹೆಚ್ಚು ಓಣಿಗಳು, ಐದು ಕೊಳಚೆ ಪ್ರದೇಶಗಳು, ಪಂಚಲಕ್ಷ್ಮೀ ಬಡಾವಣೆ, ರಾಮಕೃಷ್ಣ ಬಡಾವಣೆ ಸೇರಿದಂತೆ ಹೊಸ ತರಕಾರಿ ಮಾರುಕಟ್ಟೆ ಹಾಗೂ ಬೆಟಗೇರಿ ಬಸ್ ನಿಲ್ದಾಣವೂ ಬರುತ್ತವೆ. ಇಂತಹ ವಿಶಾಲ ವಾರ್ಡ್ನ ಅಭಿವೃದ್ಧಿಗೆ ಅಗತ್ಯವಾದಷ್ಟು ಆರ್ಥಿಕ ಸಂಪನ್ಮೂಲ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ತಲಾ ₹೧ ಕೋಟಿ ಅನುದಾನ ನೀಡಲಾಗುತ್ತಿದ್ದರೆ, ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ₹೫೦ ಲಕ್ಷ ಮಾತ್ರ ನೀಡಲಾಗುತ್ತಿದೆ. ಅಲ್ಲದೆ, ಬಿಜೆಪಿ ಸದಸ್ಯರ ವಾರ್ಡ್ಗಳಲ್ಲಿ ಕಾಮಗಾರಿಗಳ ಅಂದಾಜು ಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನೂ ಚುನಾಯಿತ ಬಿಜೆಪಿ ಸದಸ್ಯರಿಗೆ ನೀಡದೆ ಕಾಂಗ್ರೆಸ್ ಮುಖಂಡರಿಗೆ ವಹಿಸಿರುವುದು ಖಂಡನೀಯ ಎಂದು ಯಳವತ್ತಿ ಹೇಳಿದ್ದಾರೆ.
ಈ ಹಿಂದೆಯೂ ವಿವಿಧ ಇಲಾಖೆಗಳ ಅನುದಾನ ಹಂಚಿಕೆ ಸಂದರ್ಭದಲ್ಲಿ ಬಿಜೆಪಿ ಸದಸ್ಯರ ವಾರ್ಡ್ಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಅವರು, ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಪಕ್ಷಭೇದವಿಲ್ಲದೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ಸಮಾನವಾಗಿ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮುಂದುವರಿದರೆ ಬಿಜೆಪಿ ಸದಸ್ಯರ ವಾರ್ಡ್ಗಳಲ್ಲಿನ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಕಷ್ಟವಾಗಲಿದೆ. ಶಾಸಕರು ಕ್ಷೇತ್ರದ ಎಲ್ಲ ವಾರ್ಡ್ಗಳನ್ನು ಸಮಾನವಾಗಿ ಪರಿಗಣಿಸಿ ಅಭಿವೃದ್ಧಿಗೆ ಅನುದಾನ ನೀಡಬೇಕು. ಪಕ್ಷಭೇದ ಮರೆತು ಬಿಜೆಪಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ರಾಘವೇಂದ್ರ ಯಳವತ್ತಿ ಆಗ್ರಹಿಸಿದ್ದಾರೆ.



