ಬೆಂಗಳೂರು: ನಗರದಲ್ಲಿ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಕ್ರಿಸ್ಟಲ್ ಎಐ ಸಂಸ್ಥೆಯ ಮೂಲಕ ನೂರಾರು ಹೂಡಿಕೆದಾರರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸಲಾಗುತ್ತದೆ ಎಂದು ನಂಬಿಸಿ ಜನರನ್ನು ಮೋಸಗೊಳಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಕಮಿಷನರ್ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಂದ ವಿಚಾರಣೆ ಮುಂದುವರಿದಿದ್ದು, ಪ್ರಾಥಮಿಕ ಅಂದಾಜು ಪ್ರಕಾರ 5ರಿಂದ 6 ಕೋಟಿಗೂ ಅಧಿಕ ವಂಚನೆ ನಡೆದಿರುವ ಸಾಧ್ಯತೆ ಇದೆ. ಆದರೆ ನಿಜವಾದ ವಂಚನೆ ಮೊತ್ತ ನೂರಾರು ಕೋಟಿಗಳಿಗೆ ತಲುಪಿರಬಹುದೆಂಬ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದಲ್ಲದೆ, ಆರೋಪಿಗಳು ದುಬೈನಲ್ಲಿ ಕಚೇರಿ ತೆರೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ವಂಚನೆ ಜಾಲ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದೆ. ರಾಜೇಶ್ ಕಾಮತ್ ಸೇರಿದಂತೆ ಮೂವರು ಆರೋಪಿಗಳು ಸಂಘಟಿತ ಸಂಚು ರೂಪಿಸಿ ಹೂಡಿಕೆದಾರರನ್ನು ಮೋಸಗೊಳಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.



