ಬೆಂಗಳೂರು: ಬಿಎಂಟಿಸಿ ಬಸ್ ಸೇವೆಗಳ ವಿಸ್ತರಣೆಯ ನೆಪದಲ್ಲಿ ಪ್ರಯಾಣಿಕರ ಮೇಲೆ ಮತ್ತೊಂದು ದರ ಏರಿಕೆಯ ಬರೆ ಎಳೆಯಲಾಗಿದೆ. ಬೆಂಗಳೂರು ಹೊರವಲಯದ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಪರಿಚಯಿಸಿರುವ ‘ವಿಸ್ತಾರ ಮಾಸಿಕ ಪಾಸ್’ ದರವನ್ನು ₹1200ರಿಂದ ₹1500ಕ್ಕೆ ಏರಿಸಲಾಗಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ.
ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ಮಾಲೂರು ಸೇರಿದಂತೆ ದೂರದ ಪ್ರದೇಶಗಳಿಗೆ ಈಗ ಬಿಎಂಟಿಸಿ ಸೇವೆ ವಿಸ್ತರಿಸಿರುವುದರಿಂದ ಹೊಸ ಪಾಸ್ ವ್ಯವಸ್ಥೆ ಜಾರಿಗೆ ತರಲಾಗಿದೆ. ವಿಸ್ತರಿತ ಕಾರ್ಯಾಚರಣೆ ವೆಚ್ಚವನ್ನು ಸಮರ್ಥಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ನಿಗಮ ಸಮರ್ಥನೆ ನೀಡಿದೆ.
ಇದೇ ವೇಳೆ ಬಿಎಂಟಿಸಿಯ ವಜ್ರ ಎಸಿ ಬಸ್ ಮಾಸಿಕ ಪಾಸ್ ದರ ಹೆಚ್ಚಳಕ್ಕೂ ಸಿದ್ಧತೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ₹2000 ಇರುವ ಎಸಿ ಪಾಸ್ ದರವನ್ನು ₹2500ಕ್ಕೆ ಹೆಚ್ಚಿಸುವ ಪ್ರಸ್ತಾವನೆ ನಿಗಮದ ಮಟ್ಟದಲ್ಲಿ ಚರ್ಚೆಯಲ್ಲಿದೆ ಎನ್ನಲಾಗಿದೆ.
ಒಂದು ಕಡೆ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತಿದ್ದರೆ, ಮತ್ತೊಂದೆಡೆ ನಿಗಮದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಪುರುಷ ಪ್ರಯಾಣಿಕರ ಮೇಲೆ ಪರೋಕ್ಷವಾಗಿ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ದರ ಏರಿಕೆ ಘೋಷಣೆಯ ಬೆನ್ನಲ್ಲೇ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಬಿಎಂಟಿಸಿ ಮತ್ತಷ್ಟು ದರ ಪರಿಷ್ಕರಣೆಗೆ ಮುಂದಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.



