ಬೆಂಗಳೂರು: ರಾಜ್ಯದ ಬಸ್ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿದೆ. ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳದಿಂದ ಕಂಗಾಲಾಗಿರುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಮತ್ತೊಂದು ಶಾಕ್ ನೀಡಿದೆ. ಬಸ್ಗಳಲ್ಲಿ ಸಾಗಿಸುವ ಲಗೇಜ್ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಹೆಚ್ಚಳವಾದ ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಇದರಿಂದ ಹೆಚ್ಚಿನ ಲಗೇಜ್ ಸಾಗಿಸುವ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಕೆಎಸ್ಆರ್ಟಿಸಿ ಪರಿಷ್ಕೃತ ದರಗಳ ಪ್ರಕಾರ, ಮೊದಲ ಐದು ಸ್ಟೇಜ್ಗಳಿಗೆ ಈ ಹಿಂದೆ 6 ರೂಪಾಯಿ ಇದ್ದ ಲಗೇಜ್ ಶುಲ್ಕವನ್ನು 10 ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ 6ರಿಂದ 10ನೇ ಸ್ಟೇಜ್ಗಳವರೆಗೆ 10 ರೂಪಾಯಿ ಇದ್ದ ಶುಲ್ಕವನ್ನು 15 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು 11ರಿಂದ 15ನೇ ಸ್ಟೇಜ್ಗಳವರೆಗೆ 20 ರೂಪಾಯಿ ಇದ್ದ ಲಗೇಜ್ ದರವನ್ನು 25 ರೂಪಾಯಿಗೆ ಪರಿಷ್ಕರಿಸಲಾಗಿದೆ. ಈ ಮೂಲಕ ವಿವಿಧ ಹಂತಗಳಲ್ಲಿ ಲಗೇಜ್ ಶುಲ್ಕ 4ರಿಂದ 5 ರೂಪಾಯಿವರೆಗೆ ಹೆಚ್ಚಳವಾಗಿದೆ.
ಆದರೆ ಪ್ರಯಾಣಿಕರಿಗೆ ಉಚಿತ ಲಗೇಜ್ ಸಾಗಣೆ ಸೌಲಭ್ಯ ಮುಂದುವರಿಯಲಿದೆ. ಪ್ರಯಾಣಿಕರು 10 ಕೆಜಿವರೆಗಿನ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದಾಗಿದೆ. ಹಾಗೆಯೇ 20 ಕೆಜಿವರೆಗಿನ ಭಾರವಾದ ವಸ್ತುಗಳಿಗೂ ಉಚಿತ ಸಾಗಣೆ ಅವಕಾಶವಿದೆ ಎಂದು ತಿಳಿಸಲಾಗಿದೆ. ನಿಗದಿತ ತೂಕದ ಮಿತಿಗಿಂತ ಹೆಚ್ಚಿನ ಲಗೇಜ್ ಸಾಗಿಸುವವರಿಗೆ ಮಾತ್ರ ಪರಿಷ್ಕೃತ ದರದ ಪ್ರಕಾರ ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ.
ಲಗೇಜ್ ಶುಲ್ಕ ಹೆಚ್ಚಳದಿಂದ ನಿತ್ಯ ಬಸ್ಗಳಲ್ಲಿ ಪ್ರಯಾಣಿಸುವ ಜನಸಾಮಾನ್ಯರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ. ವಿಶೇಷವಾಗಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳ ನಡುವೆ ವ್ಯಾಪಾರಕ್ಕಾಗಿ ಸರಕುಗಳನ್ನು ಸಾಗಿಸುವ ಸಣ್ಣ ವ್ಯಾಪಾರಿಗಳಿಗೆ ಈ ದರ ಪರಿಷ್ಕರಣೆ ಹೆಚ್ಚುವರಿ ವೆಚ್ಚ ಉಂಟುಮಾಡಲಿದೆ.
ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳದಿಂದ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸುತ್ತಿದ್ದಾರೆ. ಇದರ ನಡುವೆಯೇ ಲಗೇಜ್ ಸಾಗಣೆ ಶುಲ್ಕವನ್ನೂ ಏರಿಸಿರುವುದು ಪ್ರಯಾಣಿಕರ ಜೇಬಿಗೆ ಮತ್ತೊಂದು ಹೊರೆಯಾಗಿದೆ. ದಿನನಿತ್ಯದ ಪ್ರಯಾಣದ ಜೊತೆಗೆ ವ್ಯಾಪಾರಕ್ಕಾಗಿ ವಸ್ತುಗಳನ್ನು ಸಾಗಿಸುವವರ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ.










