ಚಾಮರಾಜನಗರ: ದೀಪಾವಳಿ ಹಬ್ಬದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ.

ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ದಾಳಿ ಹಾಗೂ ಸಂಭವನೀಯ ಅನಾಹುತಗಳನ್ನು ತಡೆಗಟ್ಟುವ ಉದ್ದೇಶದಿಂದ ನವೆಂಬರ್ 11ರವರೆಗೆ ರಾತ್ರಿ ವೇಳೆ ಪಾದಯಾತ್ರೆ ಮತ್ತು ಕಾಲ್ನಡಿಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಅರಣ್ಯ ಮಾರ್ಗದಲ್ಲಿ ಭಕ್ತರ ಸುರಕ್ಷತೆಗೆ ಆದ್ಯತೆ ನೀಡಿರುವ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಭಕ್ತರು ಹಾಗೂ ಸಾರ್ವಜನಿಕರು ಕಾಲ್ನಡಿಗೆಯಲ್ಲಿ ತೆರಳುವಂತಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಶ್ರೀರೂಪ ಅವರು ಆದೇಶ ಹೊರಡಿಸಿದ್ದಾರೆ.
ಕಳೆದ ಬಾರಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಮಂಡ್ಯ ಮೂಲದ ಪಾದಯಾತ್ರಿಯೊಬ್ಬರು ಮೃತಪಟ್ಟಿದ್ದರು. ಚನ್ನಪಟ್ಟಣ ಮೂಲದ ಬಾಲಕನೊಬ್ಬ ಗಾಯಗೊಂಡಿದ್ದ. ಬಳಿಕ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುತ್ತಿದ್ದ ಬಾಲಕನನ್ನೂ ಚಿರತೆ ಕೊಂದು ಹಾಕಿತ್ತು.
ಈ ಹಿಂದಿನ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಮಹದೇಶ್ವರ ಬೆಟ್ಟದ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಪಾದಯಾತ್ರೆಗೆ ತಾತ್ಕಾಲಿಕ ಬ್ರೇಕ್ ಹಾಕಿವೆ. ಹೀಗಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಜಿಲ್ಲಾಡಳಿತದ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ.










