HomeGadag Newsಯೋಗದಿಂದಲೇ ಆರೋಗ್ಯದ ಸಮತೋಲನ ಸಾಧ್ಯ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಯೋಗದಿಂದಲೇ ಆರೋಗ್ಯದ ಸಮತೋಲನ ಸಾಧ್ಯ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ನಿತ್ಯ ಜೀವನದಲ್ಲಿ ನೈತಿಕ ಆಚರಣೆಗಳನ್ನು ಶುದ್ಧವಾಗಿಟ್ಟುಕೊಳ್ಳಲು ಯೋಗ ಸಹಕಾರಿಯಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಶ್ರೀಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2803ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಾತನಾಡಿದ ಶ್ರೀಗಳು, ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಭಾರತದ ಕೊಡುಗೆ ಅಪಾರವಾಗಿದೆ. ಹಣಕ್ಕಿಂತ ಆರೋಗ್ಯವೇ ಶ್ರೇಷ್ಠ ಸಂಪತ್ತು. ಶುಚಿ ಆಹಾರ, ವಿಹಾರ, ನಡಿಗೆ, ವ್ಯಾಯಾಮ ಹಾಗೂ ಯೋಗವನ್ನು ಪ್ರತಿಯೊಬ್ಬರೂ ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂದಿನ ಜೀವನಶೈಲಿಯಿಂದ ದೈಹಿಕ ಮತ್ತು ಮಾನಸಿಕ ಅಸಮತೋಲನ ಹೆಚ್ಚಾಗಿದ್ದು, ಸಮತೋಲನಭರಿತ ಬದುಕಿಗೆ ಯೋಗವೇ ಪರಿಣಾಮಕಾರಿ ಮಾರ್ಗವಾಗಿದೆ. ಪತಂಜಲಿಯ ಯೋಗ ಪರಂಪರೆ ವಿಶ್ವಕ್ಕೆ ಮಾದರಿಯಾಗಿದ್ದು, ಅದು ಭಾರತೀಯ ಸಂಸ್ಕೃತಿಯ ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಗದಗಿನ ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥ ಹಾಗೂ ಯೋಗ ಸಾಧಕ ರುದ್ರಣ್ಣ ಗುಳಗುಳಿ ಉಪನ್ಯಾಸ ನೀಡಿ, ದಿನಚರಿ ಯೋಗದಿಂದ ಆರಂಭವಾದರೆ ದಿನವಿಡೀ ಚೈತನ್ಯದಿಂದ ಬದುಕಲು ಸಾಧ್ಯವಾಗುತ್ತದೆ. ಎಲ್ಲ ಕಾರ್ಯಗಳಿಗೂ ಸಮಯ ಮೀಸಲಿಡುವ ನಾವು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೇವೆ. ಒತ್ತಡದ ಬದುಕಿನಿಂದ ಮುಕ್ತಿ ಪಡೆಯಲು ಯೋಗವೇ ಸೂಕ್ತ ಮಾರ್ಗ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡರ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ ಕರಿಸೋಮನಗೌಡರ, ತೋಂಟದಾರ್ಯ ಮಠದಲ್ಲಿ ಪ್ರತೀ ಸೋಮವಾರ ನಡೆಯುವ ಶಿವಾನುಭವ ಕಾರ್ಯಕ್ರಮ ಅನೇಕ ಸಾಹಿತಿಗಳು, ಕಲಾವಿದರು ಹಾಗೂ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುತ್ತಿರುವ ವಿಶಿಷ್ಟ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಮಟ್ಟದ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಸಿಂಗಟರಾಯನಕೆರೆ ತಾಂಡಾದ ರಾಹುಲ ಶೇಖರ ಕಾರಭಾರಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶ್ರೀಮಠದಲ್ಲಿ ಒಂದು ವಾರ ಕಾಲ ಯೋಗ ತರಬೇತಿ ನೀಡಿದ ಬಸವ ಯೋಗ ಮಹಾವಿದ್ಯಾಲಯದ ಮುಖ್ಯಸ್ಥ ಕೆ.ಎಸ್. ಪಲ್ಲೇದ ಅವರನ್ನು ಗೌರವಿಸಲಾಯಿತು. ಕವಿವಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನ ನಡೆಯಿತು.

ಮೌನಯೋಗಿ ಡಾ. ವಿಶ್ವನಾಥ ಗುರುಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದಿಂದ ಗೌರವಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ, ಅಪೇಕ್ಷಾ ಪಂಪಣ್ಣವರ ಧರ್ಮಗ್ರಂಥ ಪಠಣ, ಕುಮಾರಿ ಸಾತ್ವಿಕ ಪಂಪಣ್ಣವರ ವಚನಚಿಂತನೆ ಕಾರ್ಯಕ್ರಮ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಕೊಟ್ರೇಶ ಸಂಗಮೇಶ ಮೇಲ್ಮುರಿ ಹಾಗೂ ಕುಟುಂಬದವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಅಧ್ಯಕ್ಷ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

“ಹಣ ಕಳೆದುಕೊಂಡರೆ ಮತ್ತೆ ಸಂಪಾದಿಸಬಹುದು, ಆದರೆ ಆರೋಗ್ಯ ಕಳೆದುಕೊಂಡರೆ ಬದುಕಿನ ಸಮತೋಲನವೇ ಕಳೆದುಹೋಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ಪ್ರತಿಯೊಬ್ಬರೂ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು.”

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!