ಬೆಂಗಳೂರು: ನಗರದಲ್ಲಿ ಇಂದು ನಡೆಯುತ್ತಿರುವ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ ಹಿನ್ನೆಲೆ ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸುಮಾರು 30,000ಕ್ಕೂ ಹೆಚ್ಚು ಮಂದಿ ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಮ್ಯಾರಥಾನ್ ಆರ್‌ಎಸ್‌ಎಒಐ ಮೈದಾನದಿಂದ ಆರಂಭವಾಗಿ ಅಲ್ಲಿಯೇ ಮುಕ್ತಾಯಗೊಳ್ಳಲಿದೆ. ಕಬ್ಬನ್ ರಸ್ತೆ, ಕಾಮರಾಜ್ ರಸ್ತೆ, ರಾಜಭವನ ರಸ್ತೆ ಮತ್ತು ಅಂಬೇಡ್ಕರ್ ರಸ್ತೆಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಹಲಸೂರು, ಫ್ರೇಸರ್ ಟೌನ್ ಹಾಗೂ ಶಿವಾಜಿನಗರ ಪ್ರದೇಶಗಳ ಮೂಲಕ ಸಾಗಲಿದೆ.
ಕಬ್ಬನ್ ರಸ್ತೆಯಲ್ಲಿ ಸಿಟಿಒ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್‌ವರೆಗೆ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಿಧಾನಸೌಧದ ಕಡೆಗೆ ಎಲ್ಲಾ ವಾಹನಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಜೊತೆಗೆ ಸೇಂಟ್ ಜಾನ್ಸ್ ರಸ್ತೆ, ಕಾಮರಾಜ್ ರಸ್ತೆ, ಇನ್ಫ್ಯಾಂಟ್ರಿ ರಸ್ತೆ ಹಾಗೂ ಲೇಡಿ ಕರ್ಝನ್ ರಸ್ತೆಯ ಕೆಲವು ಭಾಗಗಳಲ್ಲಿಯೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಪರ್ಯಾಯ ಮಾರ್ಗವಾಗಿ ಕ್ವೀನ್ಸ್ ರಸ್ತೆಯಿಂದ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಮೂಲಕ ಕನ್ನಿಂಗ್‌ಹ್ಯಾಮ್ ರಸ್ತೆ ಸಂಪರ್ಕಿಸಿ ಚಾಲುಕ್ಯ ಸರ್ಕಲ್ ಮುಖಾಂತರ ಮೆಜೆಸ್ಟಿಕ್ ಅಥವಾ ಸಿಟಿ ಮಾರ್ಕೆಟ್ ಕಡೆಗೆ ತೆರಳುವಂತೆ ಸೂಚಿಸಲಾಗಿದೆ. ಶಿವಾಜಿನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಮತ್ತು ಕೆ.ಆರ್. ಮಾರ್ಕೆಟ್ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ವೆಂಕಟಸ್ವಾಮಿ ನಾಯ್ಡು ರಸ್ತೆ ಹಾಗೂ ಕನ್ನಿಂಗ್‌ಹ್ಯಾಮ್ ರಸ್ತೆಯ ಮೂಲಕ ಸಂಚರಿಸಲಿವೆ.
ಎಂಜಿ ರಸ್ತೆಯಿಂದ ಹಲಸೂರು ಕಡೆಗೆ ತೆರಳುವವರು ವೆಬ್ಸ್ ಜಂಕ್ಷನ್, ಟ್ರಿನಿಟಿ ಜಂಕ್ಷನ್ ಹಾಗೂ ಸ್ವಾಮಿ ವಿವೇಕಾನಂದ ರಸ್ತೆಯನ್ನು ಬಳಸುವಂತೆ ಸಲಹೆ ನೀಡಲಾಗಿದೆ. ಭಾರಿ ವಾಹನಗಳಿಗೆ ಕೇಂದ್ರ ವ್ಯಾಪಾರ ಪ್ರದೇಶಕ್ಕೆ ಪ್ರವೇಶವಿಲ್ಲ. ಓಲ್ಡ್ ಮದ್ರಾಸ್ ರಸ್ತೆಯಿಂದ ಬರುವವರು ಎನ್‌ಜಿಇಎಫ್ ಜಂಕ್ಷನ್ ಮತ್ತು ಸುರಂಜನ್ ದಾಸ್ ರಸ್ತೆಯ ಮೂಲಕ ಓಲ್ಡ್ ಏರ್‌ಪೋರ್ಟ್ ರಸ್ತೆಗೆ ತೆರಳಬೇಕು.
ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತ ನೋ-ಪಾರ್ಕಿಂಗ್ ಜೋನ್ ಘೋಷಿಸಲಾಗಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ಮತ್ತು ಪ್ರೇಕ್ಷಕರು ಯುಬಿ ಸಿಟಿ, ಶಿವಾಜಿನಗರ ಬಸ್ ನಿಲ್ದಾಣ ಹಾಗೂ ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ ಪಾವತಿಸಬಹುದಾದ ಪಾರ್ಕಿಂಗ್ ಸೌಲಭ್ಯವನ್ನು ಬಳಸಬಹುದು. ಎಂಎಸ್ ಬಿಲ್ಡಿಂಗ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲೂ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.



