ಶತಮಾನೋತ್ಸವ ಕಂಡ ಕರ್ನಾಟಕ ವಿಧಾನ ಪರಿಷತ್ತು ಭಾರತೀಯ ಸಂಸದೀಯ ವ್ಯವಸ್ಥೆಯಲ್ಲಿ ತನ್ನದೇ ಆದ ಮಹತ್ವವನ್ನು ಪಡೆದಿದೆ.ಇಂತಹ ವಿಧಾನ ಪರಿಷತ್ತಿನಲ್ಲಿ ಕಳೆದ 44 ವರ್ಷಗಳಿಂದ ಸದಸ್ಯರಾಗಿ ಸಭಾಪತಿ ಬಸವರಾಜ ಹೊರಟ್ಟಿಯವರು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಅವರ ಹೆಜ್ಜೆ ಗುರುತುಗಳನ್ನು ಮೆಲಕು ಹಾಕುವುದೇ ಒಂದು ರೋಚಕ ಅನುಭವ. ಅವರು ಸಾಧಿಸಿದ ಮೈಲುಗಲ್ಲುಗಳು ಸದಾ ಮಾತನಾಡುತ್ತಾ ಇರುತ್ತವೆ.
ಬಹುಶಃ ಇವರು ಮಾಡಿದ ದಾಖಲೆಯನ್ನು ಹಿಂದೆಯೂ ಯಾರು ಮಾಡಿಲ್ಲ. ಮುಂದೆಯೂ ಯಾರೂ ಮಾಡಲಾರರು. ಶತಮಾನ ಕಂಡ ಅಪರೂಪದ ದಣಿವರಿಯದ ದಿಟ್ಟ ಹೋರಾಟಗಾರ ಹೊರಟ್ಟಿಯವರು.
ನಾಡಿನ ಲಕ್ಷಾಂತರ ಶಿಕ್ಷಕರ ಬಾಳಿಗೆ ಬೆಳಕಾದವರು. ಇವರ 44 ವರ್ಷದ ಪಯಣದ ಮೇಲೆ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ನನ್ನದು.
ನಾಡಿನ ಶಿಕ್ಷಕ ಸಮೂಹದ ಸ್ವಾಭಿಮಾನ ಹೆಚ್ಚಿಸಿ ಅವರ ಬದುಕಿಗೊಂದು ದಾರಿ ತೋರಿದ ಬಸವರಾಜ ಹೊರಟ್ಟಿಯವರು, 1980 ಜೂನ್ 30ರಿಂದ ಆರಂಭವಾದ ಅವರ ಸಂಸದೀಯ ಪಯಣ ಇಂದಿಗೂ ನಿಂತಿಲ್ಲ.
ಬ್ಯಾಸರಿಲ್ಲದ ಜೀವ, ಸದಾ ಶಿಕ್ಷಕರ ಹಿತಕ್ಕಾಗಿ ಸ್ಪಂದಿಸುವ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಶಿಕ್ಷಕರಿಗಾಗಿಯೇ ಸವೆಸಿದವರು. ಅವರ ಬತ್ತದ ಹೋರಾಟ ಇಂದಿಗೂ ನಿಂತಿಲ್ಲ. ಅದೇ ಉತ್ಸಾಹ ಶಿಕ್ಷಕರೊಂದಿಗಿನ ನಂಟಿನ ಆ 44 ವರ್ಷಗಳ ಪಯಣದ ದಿನಗಳನ್ನು ನೆನೆಯುವುದೇ ಒಂದು ಸೌಭಾಗ್ಯ ಹಾಗೂ ಹೆಮ್ಮೆ.
ಇಂದು ಉದ್ಯಮವಾಗಿರುವ ರಾಜಕೀಯ ಕ್ಷೇತ್ರದಲ್ಲಿ ಶುದ್ಧ ಹಸ್ತರಾಗಿ ರಾಜಕಾರಣ ಮಾಡುವುದೆಂದರೆ ದಿನವೂ ಅಗ್ನಿ ದಿವ್ಯಗಳನ್ನು ಹಾಯುವ, ನೋವು ಸಂಕಟಗಳನ್ನು ಜೀರ್ಣಿಸಿಕೊಳ್ಳುವ ನೈತಿಕ ಶಕ್ತಿ ರಾಜಕಾರಣಿಗಳಿಗೆ ಇರಬೇಕಾಗುತ್ತದೆ. ಅಂಥಹ ನೈತಿಕ ಶಕ್ತಿಯ ಪ್ರತೀಕವೆಂಬಂತೆ ಬಸವರಾಜ ಹೊರಟ್ಟಿಯವರು ಕಾಣಿಸುತ್ತಿದ್ದಾರೆ.
ಹೊರಟ್ಟಿಯವರನ್ನು ಸಮೀಪದಿಂದ ಕಂಡವರಿಗೆ ಮಾತ್ರ ಅವರಲ್ಲೊಬ್ಬ ಅಪ್ಪಟ ಮನುಷ್ಯ ಕಾಣಿಸುತ್ತಾನೆ. ಅಧಿಕಾರದ ಮದವಾಗಲಿ, ಜನಪ್ರಿಯತೆಯ ಭ್ರಮೆಯಾಗಲಿ ಅವರನ್ನು ಕಾಡಿಲ್ಲ. ಜಾತಿ, ಕುಲ, ಗೋತ್ರದ ಕೆಸರನ್ನು ಎರಚುವವರ ಮಧ್ಯದಲ್ಲಿಯೂ ತಾವು ನಂಬಿದ ಮೌಲ್ಯಗಳಿಗೆ ತಕ್ಕ ಹಾಗೆ ಬದುಕುವ ಬಹುದೊಡ್ಡ ಆಶಯವನ್ನು ತಮ್ಮ ನಡೆ-ನುಡಿಗಳಲ್ಲಿ ಗಟ್ಟಿಯಾಗಿ ಉಳಿಸಿಕೊಂಡಿರುವ ಮತ ಮತ್ತು ಮತೀಯ ರಾಜಕಾರಣ ಮಾಡದ ನಾಡಿನ ಅಪರೂಪದ ರಾಜಕಾರಣಿಯಾಗಿದ್ದಾರೆ ಹೊರಟ್ಟಿಯವರು.
ಕಳೆದ ಶತಮಾನದ 80ರ ದಶಕವು ಕರ್ನಾಟಕದ ಪಾಲಿಗೆ ಹಲವು ಕಾರಣಗಳಿಂದ ಮನ್ವಂತರದ ಕಾಲವೆಂದು ಕರೆಯಿಸಿಕೊಳ್ಳುತ್ತಿದೆ. ಈ ಕಾಲದಲ್ಲಿ ರಾಜಕೀಯ ರಂಗ ಪ್ರವೇಶಿಸಿದ ಹೊರಟ್ಟಿಯವರು 1980ರಿಂದ ಸೋಲಿಲ್ಲದೇ ನಿರಂತರ 8 ಸಲ ಗೆಲ್ಲುತ್ತಿರುವುದಕ್ಕೆ ಪಕ್ಷ ಕಾರಣವೆಂದು ಹೇಳುವುದು ಅಸತ್ಯವಾದೀತು.
ವೈಯಕ್ತಿಕ ವ್ಯಕ್ತಿತ್ವದ ಕಾರಣದಿಂದ ಸೋಲನ್ನು ಮಣಿಸಿ, ಗದರಿಸಿ ನಿರಂತರ ಗೆಲುವಿನೊಂದಿಗೆ ಅವರು ದಿಟ್ಟ ಹೆಜ್ಜೆಗಳನ್ನು ಹಾಕುತ್ತಿದ್ದಾರೆಂಬುದು ಕನ್ನಡಿಗರ ಪ್ರಾಮಾಣಿಕ ಅಭಿಪ್ರಾಯವಾಗಿದೆ.
ಒಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮಗನಾಗಿ, ಸ್ವತಃ ಶಿಕ್ಷಕರಾಗಿ, ಶಿಕ್ಷಕ ಸಮುದಾಯದ ಪ್ರತಿನಿಧಿಗಳಾಗಿ ವಿಧಾನಪರಿಷತ್ ಪ್ರವೇಶಿಸಿ, ಸಚಿವರಾಗಿ, ಮೂರು ಬಾರಿ ಸಭಾಪತಿಗಳಾಗಿ ಆಯ್ಕೆಗೊಂಡು ಒಂದೇ ಕ್ಷೇತ್ರದಿಂದ ಸತತ 8 ಸಲ ಗೆದ್ದು ವಿಶ್ವದಾಖಲೆ ನಿರ್ಮಿಸಿ, ಇಂಗ್ಲೆಂಡ್ ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನ ದಾಖಲೆಯ ಹಿರಿಮೆಗೆ ಪಾತ್ರರಾದವರು. ಇಂತಹ ಮಾತೃಹೃದಯಿ ಗುಣ-ಸ್ವಭಾವವುಳ್ಳ ವ್ಯಕ್ತಿಗಳು ರಾಜಕೀಯದಲ್ಲಿ ದೊರೆಯುವುದು ಅಪರೂಪ. ತಮ್ಮ ಜನಪರ ನಿಲುವುಗಳೊಂದಿಗೆ ಜನಮಾನಸದಲ್ಲಿ ರಾಜಕೀಯ ಕ್ಷೇತ್ರದ ದಂತಕಥೆಯಾಗಿರುವ ಬಸವರಾಜ ಹೊರಟ್ಟಿಯವರು ಮುಂದಿನ ಪೀಳಿಗೆಗೆ ಮಾದರಿ ರಾಜಕಾರಣಿಯಾಗಿದ್ದಾರೆ.
– ಡಾ. ಬಸವರಾಜ ಧಾರವಾಡ .
Advertisement