ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿಯ ಸಮೀಪದ ತಿಮ್ಮಾಪೂರ ಗ್ರಾಮಕ್ಕೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿಯವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ವತಿಯಿಂದ ತಿಮ್ಮಾಪೂರ ಗ್ರಾಮಕ್ಕೆ ಹೊಂದಿಕೊಂಡಿರುವ ರಸ್ತಗಳಾದ ಯರೆಹಂಚಿನಾಳ, ಸೋಂಪೂರ, ಹಳ್ಳಿಗುಡಿ, ಹರ್ಲಾಪೂರ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಈಗಾಗಲೇ ಯೆರೆಹಂಚಿನಾಳ ಗ್ರಾಮದಿಂದ ಹಳ್ಳಿಗುಡಿ ರಾಷ್ಟ್ರೀಯ ಹೆದ್ದಾರಿಯವರೆಗೆ 5 ಕೋಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧವಾಗಿದೆ.
ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ ಹಾಗೂ ತಿಮ್ಮಾಪೂರ ಗ್ರಾಮಕ್ಕೆ 90 ಲಕ್ಷ ರೂ ವೆಚ್ಚದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ಲಭ್ಯವಿದ್ದು, ಅದಕ್ಕೆ ಸೂಕ್ತ ಜಾಗವಿದ್ದರೆ ನಿಮ್ಮ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ, ವೀರನಗೌಡ ಕುದುರಿಮೋತಿ, ಹನುಮಪ್ಪ ಯತ್ನಟ್ಟಿ, ಕುಮಾರ ಜೋಗಿನ, ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ರಾಮಣ್ಣ ಖಂಡ್ರೆ ಇ ಮುಂತಾದವರು ಉಪಸ್ಥಿತರಿದ್ದರು.