ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆಯನ್ನು ರಾಜ್ಯ ಸರ್ಕಾರದ ಸೂಚನೆಯಂತೆ ವಿಶೇಷವಾಗಿ ಪೋಷಕರಲ್ಲಿ, ಶಿಕ್ಷಕರಲ್ಲಿ ಜಾಗೃತಿ ಮೂಡಿಸಿ, ಅವರ ಜವಾಬ್ದಾರಿಯನ್ನು ನೆನಪಿಸಲು ಇಂದು ಜಿಲ್ಲೆಯಾದ್ಯಂತ 896 ಶಾಲೆ-ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ ಎಂದುಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಶುಕ್ರವಾರ ರಾಯನಾಳ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ರಾಯನಾಳ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ರಾಯನಾಳ, ಪಿಯು ಕಾಲೇಜು ಇವುಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪೋಷಕ-ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ರೂಢಿಗತವಾಗಲು ಪಾಲಕರು ಮಕ್ಕಳ ಮುಂದೆ ಮಾದರಿ ಪಾಲಕರಾಗಿರಬೇಕು. ಮಕ್ಕಳ ಸಮಗ್ರ ಬೆಳವಣಿಗೆಗೆ ದೈಹಿಕ ಮತ್ತು ಬೌದ್ಧಿಕ ಆರೋಗ್ಯ ಮುಖ್ಯವಾಗಿದೆ. ಶಿಕ್ಷಕರು ಮತ್ತು ಪೋಷಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದರು.
ಧಾರವಾಡ ಜಿಲ್ಲೆಯನ್ನು ವಿದ್ಯಾಕಾಶಿ ಎಂದು ಕರೆಯುತ್ತಾರೆ. ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪ್ರತಿದಿನ ಮಕ್ಕಳ ಜೊತೆ ಬೆರೆಯುವ ಅವಕಾಶ ಶಿಕ್ಷಕರಿಗೆ ಮಾತ್ರ ಇದೆ. ಮಕ್ಕಳ ಜೊತೆ ಬೆರೆಯುವ ವೃತ್ತಿ ಶಿಕ್ಷಕ ವೃತ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ಮಾತನಾಡಿ, ಮಕ್ಕಳ ಬಗ್ಗೆ ಪೋಷಕರ ಜವಾಬ್ದಾರಿ ತಿಳಿಸುವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಮಕ್ಕಳು ಉತ್ತಮ ನಾಗರಿಕರಾಗುವತ್ತ ಗಮನ ಹರಿಸಬೇಕು. ಮಕ್ಕಳಿಗೆ ಪೋಷಕರು ಮಾದರಿಯಾಗಿರಬೇಕು. ಮಕ್ಕಳ ದಿನನಿತ್ಯದ ಪ್ರಗತಿಯನ್ನು ಪೋಷಕರು ಗಮನಿಸುತ್ತಿರಬೇಕು. ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪೋಷಕರು ಅವಕಾಶ ಮಾಡಿಕೊಡಬೇಕು ಎಂದರಲ್ಲದೆ, ಮಕ್ಕಳು ಗುರಿಯ ಜೊತೆಗೆ ಮೌಲ್ಯವನ್ನು ರೂಢಿಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕನವರ್ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಜೊತೆಗೆ ಸಮುದಾಯ ಸಹಭಾಗಿದಾರರು ಕೈಜೋಡಿಸಿದರೆ ಸಾಕಷ್ಟು ಬದಲಾವಣೆ ತರಬಹುದು ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ, ವಕೀಲರಾದ ನೂರ್ ಜಹಾನ್ ಕಿಲ್ಲೇದಾರ್ ಅವರು ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಹಾಗೂ ಗೋಕುಲದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್.ಬಿ. ಸೊರಟೂರ್ ಶಿಕ್ಷಣದಲ್ಲಿ ಸಹಭಾಗಿಗಳ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಜೆ.ಬಿ. ಮಜ್ಜಗಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ತೇಜಸ್ವಿನಿ ನಾರಾಯಣಕರ, ರಾಯನಾಳ ಗ್ರಾ.ಪಂ ಅಧ್ಯಕ್ಷ ರುದ್ರಪ್ಪ ಮೇಟಿ, ಉಪಾಧ್ಯಕ್ಷ ಗಂಗಮ್ಮ ಮಾರಡಗಿ, ಜಿ.ಪಂ ಕೆಡಿಪಿ ಸದಸ್ಯರಾದ ನಾಗರಾಜ ಹೆಗ್ಗಣ್ಣವರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್, ಕೆಪಿಎಸ್ ಶಾಲೆಯ ಪ್ರಾಚಾರ್ಯ ಸಂಜೀವ್‌ಕುಮಾರ್ ಸೇರಿದಂತೆ ಗ್ರಾ.ಪಂ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳು ತಂದೆ-ತಾಯಿಗಳ ಮಾತುಗಳನ್ನು ಪಾಲಿಸಬೇಕು. ಮಕ್ಕಳು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುವತ್ತ ಗಮನಹರಿಸಬೇಕು. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಪರಸ್ಪರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಮಕ್ಕಳ ಸಮಸ್ಯೆಗಳಿಗೆ ಪೋಷಕರು ಮೊದಲು ಕಿವಿಗೊಡಬೇಕು. ಮಕ್ಕಳ ಮೇಲೆ ನಾವು ನಂಬಿಕೆಯನ್ನು ಹೊಂದಿರಬೇಕು. ಮಗುವಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಡಿಸಿ ದಿವ್ಯ ಪ್ರಭು ಕಿವಿಮಾತು ಹೇಳಿದರು.



