ಬೆಂಗಳೂರು: ನಗರದಲ್ಲಿ ಏಪ್ರಿಲ್ 29ರಂದು ಸುರಿದ ಆಲಿಕಲ್ಲು, ಗುಡುಗು ಮತ್ತು ಮಿಂಚಿನ ಸಹಿತ ಧಾರಾಕಾರ ಮಳೆ ಏಪ್ರಿಲ್ ತಿಂಗಳ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಸಂಜೆ ಒಂದೇ ಅವಧಿಯಲ್ಲಿ 111 ಮಿಲಿಮೀಟರ್ ಮಳೆಯಾಗಿದ್ದು, 2001ರ ದಾಖಲೆಗೂ ಸಮೀಪದ ಮಟ್ಟ ತಲುಪಿದೆ.
ನಗರದ ವಿವಿಧ ಭಾಗಗಳಲ್ಲಿ ಭಾರೀ ಮಳೆ ದಾಖಲಾಗಿದ್ದು, ಸಂಪಂಗಿರಾಮನಗರದಲ್ಲಿ 39 ಮಿ.ಮೀ, ಪುಲಕೇಶಿನಗರದಲ್ಲಿ 36.50 ಮಿ.ಮೀ, ಬೊಮ್ಮನಹಳ್ಳಿಯಲ್ಲಿ 31 ಮಿ.ಮೀ, ಕಾಟನ್ಪೇಟೆಯಲ್ಲಿ 29 ಮಿ.ಮೀ, ಎಚ್ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ 25 ಮಿ.ಮೀ, ಬಿಟಿಎಂ ಲೇಔಟ್ನಲ್ಲಿ 22.50 ಮಿ.ಮೀ ಹಾಗೂ ಮಾರತ್ತಹಳ್ಳಿಯಲ್ಲಿ 18.50 ಮಿ.ಮೀ ಮಳೆಯಾಗಿದೆ.
ಹವಾಮಾನ ಇಲಾಖೆ ಮುಂದಿನ ಮೂರು ದಿನಗಳವರೆಗೆ ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯೂ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಜಾರಿಯಾಗಿದೆ.
ಮಳೆಯಿಂದ ಸಂಭವಿಸಿದ ಅವಾಂತರಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಬೆಂಗಳೂರು ಮಹಾನಗರದಲ್ಲಿ ಮ್ಯಾನ್ಹೋಲ್ ಸ್ವಚ್ಛತೆ, ಅಪಾಯಕಾರಿ ಮರದ ಕೊಂಬೆಗಳ ತೆರವು ಮತ್ತು ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಂಡರ್ಪಾಸ್ಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಹಾಗೂ ಬೌರಿಂಗ್ ಆಸ್ಪತ್ರೆ ರೀತಿಯ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.



