ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್ ಮತ್ತು ವೀವ್ಸ್ ಪಡೆಯುವ ಹುಚ್ಚಿಗೆ ಬಿದ್ದಿರುವ ಕೆಲ ಯುವಕರು ಸಾರ್ವಜನಿಕ ರಸ್ತೆಗಳನ್ನು ಅಪಾಯಕಾರಿ ಸಾಹಸಕ್ಕೆ ವೇದಿಕೆಯನ್ನಾಗಿಸಿಕೊಂಡಿದ್ದಾರೆ.
ರಾತ್ರಿ ವೇಳೆ ನಡೆಯುತ್ತಿದ್ದ ವೀಲ್ಹಿಂಗ್ ಹಾವಳಿ ಇದೀಗ ಹಾಡುಹಗಲೇ ರಾಜಾರೋಷವಾಗಿ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನ ಜಯನಗರ ಸಮೀಪದ ನ್ಯಾಷನಲ್ ಕಾಲೇಜು ಬಳಿ ಯುವಕರು ಹಾಡುಹಗಲೇ ಬೈಕ್ನಲ್ಲಿ ವೀಲ್ಹಿಂಗ್ ಮಾಡಿದ್ದಾರೆ. ರಸ್ತೆಯಲ್ಲಿ ಇತರ ವಾಹನಗಳು ಸಂಚರಿಸುತ್ತಿದ್ದರೂ ಅದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಅಪಾಯಕಾರಿ ರೀತಿಯಲ್ಲಿ ಬೈಕ್ ಚಲಾಯಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಯುವಕರು, ತಮ್ಮ ವೀಲ್ಹಿಂಗ್ ಸಾಹಸದ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಉದ್ದೇಶದಿಂದ ಇಂತಹ ಅಪಾಯಕಾರಿ ಕೃತ್ಯಗಳಿಗೆ ಮುಂದಾಗುತ್ತಿರುವುದು ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇಷ್ಟು ದಿನ ರಾತ್ರಿ ವೇಳೆ ವೀಲ್ಹಿಂಗ್ ಮಾಡುತ್ತಿದ್ದವರು ಇದೀಗ ಹಗಲಿನಲ್ಲೇ ಯಾವುದೇ ಭಯವಿಲ್ಲದೆ ರಸ್ತೆಗೆ ಇಳಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿಯಮ ಉಲ್ಲಂಘಿಸಿದ ಯುವಕರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.










