ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆ ದರ್ಶನಕ್ಕೆ ಮೊದಲ ದಿನವೇ ಭಕ್ತರ ಮಹಾಪೂರವೇ ಹರಿದುಬಂದಿದೆ.
ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸಿದ್ದು, ಮುಂಜಾನೆ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ವಿಶೇಷವಾಗಿ 300 ರೂ. ಟಿಕೆಟ್ ಪಡೆದ ಭಕ್ತರ ಸಾಲು ಸುಮಾರು ಎರಡು ಕಿಲೋಮೀಟರ್ವರೆಗೆ ವಿಸ್ತರಿಸಿದೆ. ಇನ್ನು 1,000 ರೂ. ವಿಶೇಷ ದರ್ಶನದ ಸಾಲು ಕೂಡ ಸಂಪೂರ್ಣ ಭರ್ತಿಯಾಗಿದೆ. ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಗೋಲ್ಡ್ ಪಾಸ್ ಹೊಂದಿರುವವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಪ್ರೋಟೋಕಾಲ್ ಅಡಿಯಲ್ಲಿ ಬರುವ ಗಣ್ಯರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಧರ್ಮದರ್ಶನ ಸೇರಿದಂತೆ 300 ಮತ್ತು 1,000 ರೂ. ವಿಶೇಷ ದರ್ಶನದ ಸರತಿ ಸಾಲುಗಳನ್ನು ಪರಿಶೀಲಿಸಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ನೂಕುನುಗ್ಗಲು ಉಂಟಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಸಂಪ್ರದಾಯಬದ್ಧವಾಗಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ:
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಅಕ್ಟೋಬರ್ 29ರಂದು ಚಾಲನೆ ದೊರೆತಿದೆ. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.28ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಅವರು ಸಂಪ್ರದಾಯದಂತೆ ಗೊನೆಯುಳ್ಳ ಬಾಳೆಕಂಬ ಕಡಿದ ಬಳಿಕ, ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಾಯಿತು.
ದೇವಿಯ ದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದು, ದೇವಸ್ಥಾನದ ಸುತ್ತಮುತ್ತ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.










