ನವದೆಹಲಿ: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ನೀಡಿರುವ ನ್ಯಾಯಾಂಗ ಪರಿಹಾರವನ್ನು ಪ್ರಶ್ನಿಸಿ ಸಿಬಿಐ ಹಾಗೂ ಯೋಗೀಶ್ ಗೌಡ ಸಹೋದರ ಗುರುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆದಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿರುವ ನ್ಯಾಯಾಲಯ, ಲಿಖಿತ ಆಕ್ಷೇಪಣೆ ಸಲ್ಲಿಸಲು ಐದು ದಿನಗಳ ಕಾಲಾವಕಾಶ ನೀಡಿ ಆದೇಶ ಕಾಯ್ದಿರಿಸಿದೆ.
ವಿಚಾರಣೆ ವೇಳೆ ರಾಜಕೀಯ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರು ಕಾನೂನಿನಿಂದ ತಪ್ಪಿಸಿಕೊಳ್ಳುವಂತಾಗಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿದ್ದು, ವಿನಯ್ ಕುಲಕರ್ಣಿ ವಿರುದ್ಧ ಸಾಕ್ಷ್ಯನಾಶ ಹಾಗೂ ಸಾಕ್ಷಿಗಳಿಗೆ ಆಮಿಷ ಒಡ್ಡಲು ಯತ್ನಿಸಿದ ಆರೋಪಗಳಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇದೇ ಕಾರಣಕ್ಕೆ ಈ ಹಿಂದೆ ಅವರ ಜಾಮೀನು ರದ್ದಾಗಿತ್ತು. ಪ್ರಕರಣದಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ಮಾತ್ರವಲ್ಲದೆ ಪೂರಕ ಸಾಕ್ಷ್ಯಗಳೂ ಇವೆ. ಹೀಗಾಗಿ ಹೈಕೋರ್ಟ್ ನೀಡಿರುವ ಪರಿಹಾರ ಸೂಕ್ತವಲ್ಲ ಎಂದು ವಾದಿಸಿದ್ದಾರೆ.
ಇನ್ನು ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ. ಪ್ರಕರಣದ ಮೊದಲ ಆರೋಪಪಟ್ಟಿಯಲ್ಲಿ ವಿನಯ್ ಕುಲಕರ್ಣಿ ಹೆಸರು ಇರಲಿಲ್ಲ. ನಾಲ್ಕು ವರ್ಷಗಳ ಬಳಿಕ ಸಿಬಿಐ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಅಲ್ಲದೆ, ಈ ಹಿಂದೆ ನಡೆದ ಸಾಕ್ಷ್ಯ ವಿಚಾರಣೆಯ ಪ್ರಮುಖ ಅಂಶಗಳನ್ನು ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ.
ಯೋಗೀಶ್ ಗೌಡ ಕೊಲೆಗೆ ಭೂ ವಿವಾದ ಕಾರಣವಾಗಿತ್ತು ಎಂದು ಅವರ ಪತ್ನಿಯೇ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಆದರೆ ವಿಚಾರಣಾ ನ್ಯಾಯಾಲಯ ಈ ಅಂಶವನ್ನು ನಿರ್ಲಕ್ಷಿಸಿದೆ ಎಂದು ಸಿಂಘ್ವಿ ವಾದಿಸಿದ್ದಾರೆ. ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಿ ತೀರ್ಪು ನೀಡಲಾಗಿದೆ ಎಂಬುದು ಅವರ ವಾದವಾಗಿದೆ.
ಹೈಕೋರ್ಟ್ ಆದೇಶಕ್ಕೆ ಈಗ ತಡೆ ನೀಡಿದರೆ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೆ ಸಂಬಂಧಿಸಿದಂತೆ ಗಂಭೀರ ಪರಿಣಾಮ ಉಂಟಾಗಬಹುದು. ಹೀಗಾಗಿ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಎರಡೂ ಕಡೆಯ ವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಲಿಖಿತ ಆಕ್ಷೇಪಣೆ ಸಲ್ಲಿಸಲು ಐದು ದಿನಗಳ ಗಡುವು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ಆದೇಶವನ್ನು ಕಾಯ್ದಿರಿಸಿದ್ದು, ನ್ಯಾಯಾಲಯದ ಮುಂದಿನ ನಿರ್ಧಾರ ಮಹತ್ವ ಪಡೆದುಕೊಂಡಿದೆ.









