ಶಿವಮೊಗ್ಗ: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಮೃತ ಮಹಿಳೆ. ಅವರು ಸೊರಬ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಅವರ ಪತ್ನಿಯಾಗಿದ್ದಾರೆ.
ಮಂಜುಳಾ ಅವರ ಆತ್ಮಹತ್ಯೆಗೆ ಪತಿಯ ನಡತೆ ಕಾರಣ ಎನ್ನಲಾಗಿದ್ದು, ಪ್ರಭು ಮೇಸ್ತ್ರಿ ತನ್ನ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧವನ್ನು ಬಿಡುವಂತೆ ಕುಟುಂಬಸ್ಥರು ಹಲವು ಬಾರಿ ಸಲಹೆ ನೀಡಿದರೂ, ಅದನ್ನು ಲೆಕ್ಕಿಸದೆ ಮುಂದುವರಿಸಿದ್ದನೆಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ಮಂಜುಳಾ ಅವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಅವರು ಮನೆಯ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಭು ಮೇಸ್ತ್ರಿ ಈ ಮೊದಲು ಕೇರಳ ಮೂಲದ ಮಹಿಳೆಯನ್ನು ವಿವಾಹವಾಗಿ ಬಳಿಕ ದೂರವಾಗಿದ್ದರೆ, ನಂತರ ಮಂಜುಳಾ ಅವರನ್ನು ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ.
ಮೃತಳ ತಾಯಿ ಶೋಭಾ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಭು ಮೇಸ್ತ್ರಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.



