ಬೆಳಗಾವಿ: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಅವರ ಅಂತ್ಯಕ್ರಿಯೆ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಮರಾಠಾ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಪೊಲೀಸ್ ಅಧಿಕಾರಿಗಳು, ಸ್ನೇಹಿತರು ಹಾಗೂ ಸಾವಿರಾರು ಗ್ರಾಮಸ್ಥರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಗ್ರಾಮದಲ್ಲಿರುವ ಅರುಣ್ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅವರ ಪುತ್ರ ವಲ್ಲಭ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅರುಣ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು. ಪೊಲೀಸ್ ಇಲಾಖೆಯ ವತಿಯಿಂದ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ ನೀಡಲಾಯಿತು.
ಬೈಕ್ ರ್ಯಾಲಿ ಮೂಲಕ ಸ್ವಗ್ರಾಮಕ್ಕೆ ಪಾರ್ಥಿವ ಶರೀರ
ಗೋವಾದಿಂದ ಅಥಣಿ ಮಾರ್ಗವಾಗಿ ಆಗಮಿಸಿದ ಅರುಣ್ ಸಾಳುಂಕೆ ಅವರ ಪಾರ್ಥಿವ ಶರೀರವನ್ನು ಬೈಕ್ ರ್ಯಾಲಿ ಮೂಲಕ ಸಾವಿರಾರು ಯುವಕರು ಸ್ವಗ್ರಾಮಕ್ಕೆ ಬರಮಾಡಿಕೊಂಡರು. ಮಾರ್ಗದುದ್ದಕ್ಕೂ ಸಾರ್ವಜನಿಕರು ನಿಂತು ಗೌರವ ಸಲ್ಲಿಸಿದರು. ಬಳಿಕ ಗ್ರಾಮದ ತೋಟದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಅರುಣ್ ಅವರ ಸ್ನೇಹಿತರು, ಪೊಲೀಸ್ ಇಲಾಖೆಯ ಸಹೋದ್ಯೋಗಿಗಳು, ಬ್ಯಾಚ್ನ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಮಕ್ಕಳ ಅಂತಿಮ ನಮನ ಕಂಡು ಕಣ್ಣೀರಾದ ಜನರು
ಅಂತಿಮ ದರ್ಶನದ ವೇಳೆ ಅರುಣ್ ಅವರ ಪುತ್ರಿ ದೀಪ ಬೆಳಗಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಪುತ್ರ ವಲ್ಲಭ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಕ್ಷಣಗಳನ್ನು ಕಂಡು ನೆರೆದಿದ್ದ ಜನಸ್ತೋಮ ಕಣ್ಣೀರಾಯಿತು. ಅರುಣ್ ಅವರೊಂದಿಗೆ ಇಲಾಖೆಯಲ್ಲಿ ಕೆಲಸ ಮಾಡಿದ್ದ ಸಹೋದ್ಯೋಗಿಗಳೂ ತಮ್ಮ ಆತ್ಮೀಯ ಅಧಿಕಾರಿಯನ್ನು ನೆನೆದು ಕಣ್ಣೀರು ಹಾಕಿದರು.
ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಅಂತಿಮ ಸಂಸ್ಕಾರದ ಮೂಲಕ ಅರಟಾಳ ಗ್ರಾಮಸ್ಥರು ತಮ್ಮ ನೆಚ್ಚಿನ ಪೊಲೀಸ್ ಅಧಿಕಾರಿಗೆ ಭಾವಪೂರ್ಣ ವಿದಾಯ ಹೇಳಿದರು.










