ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯಾದ್ಯಂತ ನಡೆದ ಔಷಧ ವ್ಯಾಪಾರ ಬಂದ್‌ಗೆ ಹಗರಿಬೊಮ್ಮನಹಳ್ಳಿ ತಾಲೂಕು ಔಷಧ ವ್ಯಾಪಾರಿಗಳ ಸಂಘ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಹುತೇಕ ಮೆಡಿಕಲ್ ಶಾಪ್‌ಗಳು ಬಂದ್ ಆಗಿ ವ್ಯಾಪಾರ ಸ್ಥಗಿತಗೊಂಡಿತು. ಆನ್‌ಲೈನ್ ಮೂಲಕ ನಿಯಂತ್ರಣರಹಿತ ಔಷಧ ಮಾರಾಟ ನಡೆಯುತ್ತಿರುವುದನ್ನು ಖಂಡಿಸಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ್ ರೆಡ್ಡಿ ಮಾತನಾಡಿ, “ಆನ್‌ಲೈನ್ ಮೂಲಕ ಔಷಧ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಪ್ರದಾಯಿಕ ಔಷಧ ಅಂಗಡಿಗಳಿಗೆ ಭಾರೀ ಹೊಡೆತ ಬೀಳುತ್ತಿದೆ. ಸಾವಿರಾರು ಸಣ್ಣ ಹಾಗೂ ಮಧ್ಯಮ ಮಟ್ಟದ ಔಷಧ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ವ್ಯಾಪಾರಿಗಳ ಹಿತ ಕಾಪಾಡಬೇಕು” ಎಂದು ಆಗ್ರಹಿಸಿದರು.
ತಾಲೂಕು ಉಪಾಧ್ಯಕ್ಷ ಚಂದ್ರಶೇಖರ್ ರೆಡ್ಡಿ ಮಾತನಾಡಿ, “ಆನ್‌ಲೈನ್‌ನಲ್ಲಿ ನಿಯಮ ಉಲ್ಲಂಘಿಸಿ ಔಷಧ ಮಾರಾಟ ಮಾಡುತ್ತಿರುವುದು ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ವೈದ್ಯರ ಸಲಹೆ ಇಲ್ಲದೆ ಔಷಧ ಖರೀದಿ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದರು.
ಔಷಧ ವ್ಯಾಪಾರಿಗಳ ಹಿತಾಸಕ್ತಿ ಹಾಗೂ ಸಾರ್ವಜನಿಕರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದು, ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲಾ ಔಷಧ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿ ಸಹಕರಿಸಿವೆ ಎಂದು ಸಂಘ ತಿಳಿಸಿದೆ.
ಆನ್‌ಲೈನ್ ಔಷಧ ಮಾರಾಟದ ಮೇಲೆ ಸರ್ಕಾರ ಕಠಿಣ ನಿಯಂತ್ರಣ ಹೇರಬೇಕು. ನಿಯಮಬಾಹಿರ ಮಾರಾಟ ತಡೆಯುವ ಜೊತೆಗೆ ಸ್ಥಳೀಯ ಔಷಧ ವ್ಯಾಪಾರಿಗಳ ಹಿತ ಕಾಪಾಡಲು ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವೆಂಕಟೇಶ್, ವಾಹಿದ್ ಸಾಹೇಬ್ (ಕಾರ್ಯದರ್ಶಿ), ಬಂಡ್ರಿ ವಿನಾಯಕ, ಈಕೆ ರಾಘವೇಂದ್ರ, ವಿರುಪಾಕ್ಷಪ್ಪ ರೆಡ್ಡಿ, ಕೆ. ಬಸವರಾಜ್, ಸತೀಶ್ ಜಿ., ಗುರುರಾಜ, ಗೋಪಾಲಕೃಷ್ಣ, ಪ್ರವೀಣ್ ಕಡ್ಲಿ ಸೇರಿದಂತೆ ವಿವಿಧ ಮೆಡಿಕಲ್ ಶಾಪ್ ಅಂಗಡಿ ಮಾಲೀಕರು ಹಾಗೂ ವ್ಯಾಪಾರಿಗಳು ಉಪಸ್ಥಿತರಿದ್ದರು.



