ದೆಹಲಿ: ಜಗತ್ತು ಕೋವಿಡ್ ಮಹಾಮಾರಿಯ ಪರಿಣಾಮಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಡುವೆಯೇ, ಇದೀಗ ಮತ್ತೊಂದು ಅಪಾಯಕಾರಿ ವೈರಸ್ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.
ಆರೋಗ್ಯ ತಜ್ಞರ ಪ್ರಕಾರ, ಪ್ರಸ್ತುತ ಹರಡುತ್ತಿರುವ ಎಬೋಲಾ ಬುಂಡಿಬುಗ್ಯೊ ತಳಿಗೆ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಸೋಂಕಿನ ತೀವ್ರತೆ ಹೆಚ್ಚಿದರೆ ಸಾವಿನ ಪ್ರಮಾಣವೂ ಗಂಭೀರವಾಗಿರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಆದರೆ, ಈ ವೈರಸ್ ಕೋವಿಡ್‌ನಂತೆ ಗಾಳಿಯ ಮೂಲಕ ವೇಗವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಎಬೋಲಾ ವೈರಸ್ ಮುಖ್ಯವಾಗಿ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕದಿಂದ ಮತ್ತೊಬ್ಬರಿಗೆ ಸೋಂಕು ತಗುಲುವ ಸಾಧ್ಯತೆ ಇದೆ.
ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೂ ಕಾಂಗೋ, ಉಗಾಂಡ ಸೇರಿದಂತೆ ಅಪಾಯ ಹೆಚ್ಚಿರುವ ಆಫ್ರಿಕಾ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರೋಗ್ಯ ತಪಾಸಣೆ, ಅಗತ್ಯವಿದ್ದರೆ ಕ್ವಾರಂಟೈನ್ ವ್ಯವಸ್ಥೆ ಜಾರಿಗೊಳಿಸುವುದು ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸಾರ್ವಜನಿಕರು ಸದ್ಯಕ್ಕೆ ಆಫ್ರಿಕಾ ದೇಶಗಳ ಪ್ರವಾಸದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.
ಎಬೋಲಾ ವೈರಸ್‌ನ ಪ್ರಮುಖ ಲಕ್ಷಣಗಳು:
ಎಬೋಲಾ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ತೀವ್ರ ಜ್ವರ, ತಲೆನೋವು, ಮೈಕೈನೋವು, ವಾಂತಿ ಹಾಗೂ ಭೇದಿ ಸೇರಿವೆ. ಸೋಂಕು ಗಂಭೀರ ಸ್ವರೂಪ ಪಡೆದರೆ ಲಿವರ್ ಮತ್ತು ಶ್ವಾಸಕೋಶ ವೈಫಲ್ಯ ಉಂಟಾಗಿ ಜೀವಾಪಾಯ ಸಂಭವಿಸುವ ಸಾಧ್ಯತೆ ಇದೆ.



