ಬೆಂಗಳೂರು: ಗೌರಿ ಹಬ್ಬದಂದು ಆಟವಾಡುತ್ತಿದ್ದ 6 ವರ್ಷದ ಬಾಲಕ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುಂಕದಕಟ್ಟೆಯ ಅಯ್ಯಪ್ಪ ಸರ್ಕಲ್ ಬಳಿ ನಡೆದಿದೆ.
ವಿನೀಶ್ ಎಂಬ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸದ್ಯ ಬಾಲಕನನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದ್ದರೂ, ಗಾಯಗಳ ಗಂಭೀರತೆಯಿಂದಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ.
ಚಿಕಿತ್ಸೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಬಾಲಕನ ಪೋಷಕರು ಸಾರ್ವಜನಿಕರು ಹಾಗೂ ದಾನಿಗಳಿಂದ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಘಟನೆ ಕುರಿತು ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.



