ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 60 ವರ್ಷ ಕಾಂಗ್ರೆಸ್ ಆಳಿದೆ. ಇದುವರೆಗಿನ ಮುಖ್ಯಮಂತ್ರಿಗಳಲ್ಲಿ ಶೇ.65ರಷ್ಟು ಸಾಲ ಮಾಡಿದ್ದು ಸಿದ್ದರಾಮಯ್ಯ. ಬಜೆಟ್ನಲ್ಲಿ ಕಳ್ಳ ಲೆಕ್ಕ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಬೆಲೆ ಏರಿಕೆಯ ಫೆಸ್ಟಿವಲ್ ಮುಂದೆ ಕಾದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಶುಲ್ಕ ಸೇರಿದಂತೆ ಎಲ್ಲ ದರ ಏರಿಕೆ ಆಗಿದೆ. ಬ್ರ್ಯಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂದಿದೆ. ವಿದ್ಯುತ್ ದರವನ್ನು ನಾವು ಏರಿಸಿಲ್ಲ, ಬದಲಾಗಿ ಕೋರ್ಟ್ ಆದೇಶ ಎಂದು ಸರ್ಕಾರ ಹೇಳುತ್ತಿದೆ. ಆದಾಗ್ಯೂ ಪೆನ್ಶನ್ ಮತ್ತು ಗ್ರಾಚ್ಯುಟಿಗೆ ಸರ್ಕಾರ ಕೊಡದೇ ಜನರಿಂದ ಕೊಡಿಸುತ್ತಿದಾರೆ. ಪೆನ್ಶನ್ಗೆ ಹಣ ಕೊಡುವ ಯೋಗ್ಯತೆ ಇವರಿಗಿಲ್ಲ ಎಂದು ಟೀಕಿಸಿದ್ದಾರೆ.
ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಉಚ್ಚಾಟನೆ ಆಗಲಿದ್ದಾರೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ”ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡಲಿದ್ದಾರೆ. ನಾವೆಲ್ಲಾ ಒಟ್ಟಿಗೆ ಕಾಂಗ್ರೆಸ್ ಎದುರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಪಕ್ಷ ನಮ್ಮ ತಾಯಿ ಇದ್ದ ಹಾಗೆ, ಅದರ ವಿರುದ್ದ ಯಾವುದೇ ಹೇಳಿಕೆ ಕೊಡಬಾರದು” ಎಂದು ಮನವಿ ಮಾಡುತ್ತೇವೆ ಎಂದರು.