ನವದೆಹಲಿ: ಪ್ರೋತ್ಸಾಹ ಧನ ಇಲ್ಲದೇ ರೈತರು ಮತ್ತು ಹಾಲು ಒಕ್ಕೂಟಗಳು ಸಂಕಷ್ಟಕ್ಕೀಡಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ ಆರು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಯಾವುದೇ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಸುಮಾರು 500 ಕೋಟಿ ರೂ. ಪ್ರೋತ್ಸಾಹಧನ ಕೊಡುವುದು ಬಾಕಿ ಇದೆ.
ಪ್ರೋತ್ಸಾಹ ಧನ ಇಲ್ಲದೇ ರೈತರು ಮತ್ತು ಹಾಲು ಒಕ್ಕೂಟಗಳು ಸಂಕಷ್ಟಕ್ಕೀಡಾಗಿವೆ. ಇಡೀ ವರ್ಷ ಪ್ರೋತ್ಸಾಹಧನ ನೀಡದೇ, ನೀವೇ ದರ ಹೆಚ್ಚಳ ಮಾಡಿಕೊಂಡು ನೀವೇ ಪ್ರೋತ್ಸಾಹಧನ ನೀಡಿ ಎಂದು ಜನರ ಮೇಲೆ ಹೊರೆ ಹಾಕಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ದಿವಾಳಿಯಾಗಿರುವುದಕ್ಕೆ ಇದು ಮತ್ತೊಂದು ಸಾಕ್ಷಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಮ್ಮ ವೈಫಲ್ಯ ಮುಚ್ಚಿಕೊಂಡು ಸರ್ಕಾರ ಕೊಡಬೇಕಾದ ಪ್ರೋತ್ಸಾಹಧನವನ್ನು ಕೆಎಂಎಫ್‌ಗೆ 4 ರೂ. ಹಾಲಿನ ದರ ಹೆಚ್ಚಳ ಮಾಡಿ, ಜನರ ಮೇಲೆ ಭಾರ ಹೇರಿದೆ. ವರ್ಷದಲ್ಲಿ ಮೂರು ಬಾರಿ 9 ರೂ. ಹೆಚ್ಚಳ ಮಾಡಿದ್ದಾರೆ. ಇದೊಂದು ಬೇಜವಾಬ್ದಾರಿ ರಾಜ್ಯ ವಿರೋಧಿ ಸರ್ಕಾರವಾಗಿದೆ. ರಾಜ್ಯವನ್ನು ದಿವಾಳಿ ಮಾಡಿ ಆರ್ಥಿಕವಾಗಿ ಸದೃಢವಾಗಿರುವ ರಾಜ್ಯವನ್ನು ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.