ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಭುಗಿಲೆದ್ದಿದ್ದ ಅಸಮಾಧಾನ ಸದ್ಯ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿವೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ, ಹೈಕಮಾಂಡ್ ಮಧ್ಯಸ್ಥಿಕೆಯ ಬಳಿಕ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವ ಸಾಧ್ಯತೆ ವ್ಯಕ್ತವಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾದ ರಾಮಲಿಂಗಾರೆಡ್ಡಿ, ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಕುರಿತು ನೀಡಿದ್ದ ಭರವಸೆ ಈಡೇರಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೊದಲೇ ಮಾಹಿತಿ ನೀಡಿದ್ದರೆ ಸಚಿವ ಸ್ಥಾನ ಸ್ವೀಕರಿಸುವ ಪ್ರಶ್ನೆಯೇ ಇರಲಿಲ್ಲ” ಎಂದು ತಮ್ಮ ಬೇಸರವನ್ನು ಉಸ್ತುವಾರಿಗಳ ಮುಂದೆ ಹೊರಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಪ್ರತಿಕ್ರಿಯಿಸಿದ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ರಾಮಲಿಂಗಾರೆಡ್ಡಿ ಕೂಡ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸಂಜೆವರೆಗೆ ಕಾಯುವುದಾಗಿ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸುರ್ಜೇವಾಲ ನಡುವೆ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಹತ್ವದ ಮಾತುಕತೆ ನಡೆದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಮೂಡಿರುವ ಅಸಮಾಧಾನ ಶಮನಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
ಇದೇ ವೇಳೆ ಹಿರಿಯ ಸಚಿವರ ಅಸಮಾಧಾನ ಕುರಿತು ಸಚಿವ ಸತೀಶ್ ಜಾರಕಿಹೊಳಿ ಕೂಡ ಸಕ್ರಿಯರಾಗಿದ್ದು, ಕೆ.ಎಚ್. ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಪರವಾಗಿ ಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸದೇ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಖಾತೆ ಹಂಚಿಕೆ ವಿವಾದದಿಂದ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟು ಇದೀಗ ಹೈಕಮಾಂಡ್ ಮಧ್ಯಪ್ರವೇಶದ ಮೂಲಕ ಪರಿಹಾರದ ಹಾದಿಯತ್ತ ಸಾಗುತ್ತಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



