ಬೆಂಗಳೂರು: ಸಿನಿಮಾ ದೃಶ್ಯವನ್ನೇ ಮೀರಿಸುವ ರೀತಿಯಲ್ಲಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಕಬಾಬ್ ಸೆಂಟರ್ಗೆ ನುಗ್ಗಿದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಹೊಮ್ಮದೇವನಹಳ್ಳಿಯಲ್ಲಿ ನಡೆದಿದೆ.
ಕಾರಿನ ಡಿಕ್ಕಿಯ ರಭಸಕ್ಕೆ ಬೈಕ್ಗಳು ಜಖಂಗೊಂಡಿದ್ದು, ಕಬಾಬ್ ಸೆಂಟರ್ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಈ ವೇಳೆ ಬಿಸಿ ಎಣ್ಣೆ ಮೈಮೇಲೆ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳೆದ ತಿಂಗಳ 30ರಂದು ಈ ಅಪಘಾತ ಸಂಭವಿಸಿದೆ. ಸಜೀನಾ ಬೇಗಂ ಎಂಬುವರು ಚಲಾಯಿಸುತ್ತಿದ್ದ ಪಜೆರೊ ಸ್ಪೋರ್ಟ್ಸ್ ಕಾರು (KA-05-MR-3925) ಅತಿವೇಗವಾಗಿ ಬಂದಿದ್ದು, ಚಾಲಕಿಯ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ನೇರವಾಗಿ ಹಳೇವೂರಮ್ಮ ಕಬಾಬ್ ಸೆಂಟರ್ಗೆ ನುಗ್ಗಿದೆ.
ಬಿಸಿ ಎಣ್ಣೆ ಬಿದ್ದು ಮೂವರಿಗೆ ಗಂಭೀರ ಗಾಯ:
ಅಪಘಾತದ ವೇಳೆ ಕಬಾಬ್ ತಯಾರಿಸಲು ಬಳಸುತ್ತಿದ್ದ ಬಿಸಿ ಎಣ್ಣೆ ಅಲ್ಲಿದ್ದ ಬಸವರಾಜ್, ಮುನಿಕೃಷ್ಣ ಹಾಗೂ ಮಂಜೇಶ್ ಅವರ ಮೈಮೇಲೆ ಬಿದ್ದಿದೆ. ಪರಿಣಾಮ ಮೂವರಿಗೂ ಗಂಭೀರ ಸುಟ್ಟ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳಿಗೆ ಮೆಡೆಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ಕಾರು ಚಲಾಯಿಸುತ್ತಿದ್ದ ಮಹಿಳೆ ಹಾಗೂ ಅಪಘಾತಕ್ಕೆ ಕಾರಣವಾದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










